ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ನಗರಕ್ಕೆ ಆಗಮನ

KannadaprabhaNewsNetwork |  
Published : Feb 08, 2026, 01:30 AM IST
 | Kannada Prabha

ಸಾರಾಂಶ

ರಾಜ್ಯದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮುಂತಾದ 26 ಸಹಜಾತಿಗಳ ವಿವಿಧ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಕಲಬುರ್ಗಿ ಜಿಲ್ಲೆ ಕರದಾಳು ಶಕ್ತಿಪೀಠ ಅಧ್ಯಕ್ಷ ಪ್ರಣಾವಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಶನಿವಾರ ನಗರಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಜ್ಯದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮುಂತಾದ 26 ಸಹಜಾತಿಗಳ ವಿವಿಧ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಕಲಬುರ್ಗಿ ಜಿಲ್ಲೆ ಕರದಾಳು ಶಕ್ತಿಪೀಠ ಅಧ್ಯಕ್ಷ ಪ್ರಣಾವಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಶನಿವಾರ ನಗರಕ್ಕೆ ಆಗಮಿಸಿತು.

ಜಿಲ್ಲೆಯ ಸಮಾಜದ ಮುಖಂಡರು ತಾಲೂಕಿನ ಕೋರಾ ಬಳಿ ಪಾದಯಾತ್ರೆಯನ್ನು ಸ್ವಾಗತಿಸಿ ಬರಮಾಡಿಕೊಂಡರು. ಜಗದ್ಗುರು ನಾರಾಯಣ ಗುರುಗಳ ಮೂರ್ತಿಯ ಮೆರವಣಿಗೆಯೊಂದಿಗೆ ಪ್ರಣಾವಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಸಾಗಿದೆ. ಪಾದಯಾತ್ರೆ ತಂಡ ಶನಿವಾರ ಆಗಮಿಸಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದೆ, ಇದೇ 9ರಂದು ಬೆಳಿಗ್ಗೆ 6 ಗಂಟೆಗೆ ಹೊರಟು ದಾಬಸ್‌ಪೇಟೆ ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಲಿದೆ.

ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮುಖಂಡರ ಸಭೆ ನಡೆಸಿದ ಪ್ರಣವಾನಂದ ಸ್ವಾಮೀಜಿ, 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು, ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದರು.

ಬೆಂಗಳೂರಿನಲ್ಲಿ ಸರ್ಕಾರ ಜಗದ್ಗುರು ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ ಮಾಡಬೇಕು, ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಅನುದಾನ ನೀಡಬೇಕು. ಸಮಾಜದ ಕುಲಕಸುಬಾದ ಸೇಂದಿ ಮಾರಾಟಕ್ಕೆ ವ್ಯವಸ್ಥೆ ಜಾರಿ ಮಾಡಬೇಕು, ನಿರಾ ನಿಗಮ ಸ್ಥಾಪನೆ ಮಾಡಬೇಕು, ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಎಕರೆ ಜಮೀನು ನೀಡಿ ಸಮಾಜದ ವಿದ್ಯಾರ್ಥಿಗಳ ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಕೋರ್ಸ್‌ಗಳು ಹಾಗೂ ಕುಲಕಸುಬು ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ 18 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಬೇಡಿಕೆಗಳಿಗೆ ಸರ್ಕಾರವನ್ನು ಒತ್ತಾಯಿಸುವುದಲ್ಲದೆ ನಮ್ಮ ಸಮಾಜದಲ್ಲಿ ಸ್ವಾಭಿಮಾನ ಹೆಚ್ಚಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕರದಾಳು ಶಕ್ತಿಪೀಠದಿಂದ ಇಲ್ಲಿಯವರೆಗೆ 33 ದಿನ 630 ಕಿ.ಮೀ ದೂರ ಪಾದಯಾತ್ರೆ ಮಾಡಲಾಗಿದೆ. 9ರಂದು ಇಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಾಗುವುದು. ಈ ಜಿಲ್ಲೆಯಿಂದ ಕನಿಷ್ಟ ಒಂದು ಸಾವಿರ ಜನ ಫ್ರೀಡಂ ಪಾರ್ಕ್ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

ರಾಷ್ಟ್ರೀಯ ಈಡಿಗ ಮಹಾಮಂಡಲಿಯ ಜಿಲ್ಲಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನರಸಯ್ಯ, ಕಾರ್ಯದರ್ಶಿ ಡಿ.ಆರ್.ಹನುಮಂತರಾಜು, ಜಗದ್ಗುರು ನಾರಾಯಣಗುರು ಸೇವಾ ಸಮಾಜಂ ಉಪಾಧ್ಯಕ್ಷ ರಾಜನ್, ಕಾರ್ಯದರ್ಶಿ ಬಿ.ಪಿ.ರಾಜೇಶ್, ಶಿರಾ ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ರಾಷ್ಟ್ರೀಯ ಈಡಿಗ ಮಹಾಮಂಡಳಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪ್ರಭಾ ವಸಂತ್, ಮುಖಂಡರಾದ ಸಂತೋಷ್, ವಸಂತ ರಾಜನ್ ಸೇರಿದಂತೆ ವಿವಿಧ ತಾಲೂಕುಗಳ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ