ಜಿಲ್ಲಾ ಕಾಂಗ್ರೆಸ್‌ಗೆ ಪ್ರಸನ್ನ ನೂತನ ಸಾರಥಿ

KannadaprabhaNewsNetwork | Published : Apr 3, 2024 1:31 AM

ಸಾರಾಂಶ

ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿದ್ದ ಎಚ್.ಎಸ್ ಸುಂದರೇಶ್ ಅವರ ಸ್ಥಾನಕ್ಕೆ ಆರ್.ಪ್ರಸನ್ನಕುಮಾರ್ ಅವರನ್ನು ನೇಮಿಸಿ ಆದೇಶ ಹೊರಬಿದ್ದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಯ ಈ ಹೊಸ್ತಿಲಲ್ಲೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗಿದ್ದು, ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿದ್ದ ಎಚ್.ಎಸ್ ಸುಂದರೇಶ್ ಅವರನ್ನು ಈಚೆಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರಿಂದ ಈ ಸ್ಥಾನಲ್ಲೆ ಆರ್.ಪ್ರಸನ್ನಕುಮಾರ್ ಅವರನ್ನು ನೇಮಿಸಲಾಗಿದೆ.ಜಿಲ್ಲಾ ಕಾಂಗ್ರೆಸ್, ಶಿವಮೊಗ್ಗ ನಗರಸಭೆ, ಭದ್ರಾಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾಗಿ , ವಿಧಾನಪರಿಷತ್ ಸದಸ್ಯರಾಗಿಯೂ ಪಕ್ಷದಲ್ಲಿ ಅನುಭವಿ ಮುಖಂಡರಾಗಿರುವ ಆರ್. ಪ್ರಸನ್ನಕುಮಾರ್ ಅವರನ್ನು ಮತ್ತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸಚಿವರ ಗೌರವ ಉಳಿಸುವ ಕೆಲಸ ಮಾಡುವೆ: ಆರ್.ಪ್ರಸನ್ನಕುಮಾರ್ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಉಸ್ತುವಾರಿ ಸಚಿವರ ಗೌರವವನ್ನು ಉಳಿಸುವ ಕೆಲಸವನ್ನು ಕಾರ್ಯಕರ್ತರೊಂದಿಗೆ ಸೇರಿ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ನನಗೆ ನೀಡಿದ ಜವಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ನಿರ್ವಹಿಸುವೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ಸಿನ ಎಲ್ಲಾ ಘಟಕಗಳನ್ನು ಒಗ್ಗೂಡಿಸಿ ಮನಸ್ತಾಪಗಳನ್ನೆಲ್ಲ ಸರಿಪಡಿಸಿ ಲೋಕಸಭಾ ಚುನಾವಣೆಯ ಮೇಲೆ ನಿಗಾ ಹಿಟ್ಟುಕೊಂಡು ತತ್‌ಕ್ಷಣ್‌ದಿಂದಲೇ ಕಾರ್ಯ ಪ್ರವೃತ್ತರಾಗಿದ್ದೇನೆ. ಇದೊಂದು ಒಳ್ಳೆಯ ಅವಕಾಶ ಈ ಬಾರಿ ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ ಗ್ಯಾರಂಟಿಗಳು ನಮ್ಮ ಬೆಂಬಲಕ್ಕೆ ನಿಂತೆ ನಿಲ್ಲುತ್ತವೆ. ಪ್ರತಿಯೊಂದು ಫಲಾನುಭವಿಗಳ ಮನೆಗೂ ಕನಿಷ್ಟ 4 ರಿಂದ 5 ಸಾವಿರ ರು. ಆದಾಯ ಬರುತ್ತಿದೆ. ಇದು ನುಡಿದಂತೆ ನಡೆದ ಸರ್ಕಾರ. ಎಲ್ಲಾ ಗ್ಯಾರಂಟಿಗಳು ಮಧ್ಯವರ್ತಿಯ ತಲುಪದೇ ನೇರವಾಗಿ ಫಲಾನುಭವಿಗಳಿಗೆ ಸೇರುತ್ತವೆ ಎಂದರು.ನನ್ನ ಬೂತ್ ನನ್ನ ಕೆಲಸ ಎಂಬ ಧೈಯ ವಾಕ್ಯದಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕರು ಕೂಡ ತಮ್ಮ ಪ್ರಣಾಳಿಕೆಯಲ್ಲಿ 10 ಗ್ಯಾರಂಟಿಗಳನ್ನು ಸೇರಿಸಿದ್ದಾರೆ. ಈ ಗ್ಯಾರಂಟಿಗಳು ಕೂಡ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರಣವಾಗುತ್ತವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಎಸ್.ಕೆ.ಮರಿಯಪ್ಪ, ಚಂದ್ರಭೂ ಪಾಲ್, ಕಲೀಂ ಪಾಶಾ, ಇಸ್ಮಾಯಿಲ್ ಖಾನ್, ವೈ. ಎಚ್.ನಾಗರಾಜ್, ರವಿಕುಮಾರ್, ಎಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಅನಿತಾಕುಮಾರಿ, ಮಂಜುನಾಥ್ ಬಾಬು ಮತ್ತಿತರರು ಇದ್ದರು.

ನೂತನ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಗೆ ಯುವ ಕಾಂಗ್ರೆಸ್ಸಿಂದ ಅಭಿನಂದನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‌.ಪಿ.ಗಿರೀಶ್, ಕಾರ್ಯದರ್ಶಿ ಆರ್.ಕಿರಣ್, ಟಿ.ವಿ.ರಂಜಿತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಸದಸ್ಯ ಎಂ.ರಾಹುಲ್, ಶಿವಮೊಗ್ಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಎಸ್.ಕುಮಾರೇಶ್, ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಎಂ.ರಾಕೇಶ್, ಪುಷ್ಪಕ್ ಕುಮಾರ್ ಮತ್ತಿತರರು ಇದ್ದರು.

Share this article