ವಿಜೃಂಭಣೆಯ ಬೆಟ್ಟಳ್ಳಿ ಮಾರಮ್ಮನ ಜಾತ್ರೆ

KannadaprabhaNewsNetwork | Published : Apr 3, 2024 1:31 AM

ಸಾರಾಂಶ

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಜಾಗರ ದೇವಾಲಯಕ್ಕೆ ಸಮರ್ಪಣೆ, ಮಂಗಳವಾರ ತಂಪು ಜ್ಯೋತಿ ಅಂಗವಾಗಿ ವಿಶೇಷ ಹೂವಿನ ಅಲಂಕಾರದಲ್ಲಿ ದೇವಾಲಯ ಕಂಗೊಳಿಸಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಜಾಗರ ದೇವಾಲಯಕ್ಕೆ ಸಮರ್ಪಣೆ, ಮಂಗಳವಾರ ತಂಪು ಜ್ಯೋತಿ ಅಂಗವಾಗಿ ವಿಶೇಷ ಹೂವಿನ ಅಲಂಕಾರದಲ್ಲಿ ದೇವಾಲಯ ಕಂಗೊಳಿಸಿತು. ಹನೂರು ಪಟ್ಟಣದ ಆದಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರ ಮಹೋತ್ಸವದ ಪ್ರಯುಕ್ತ ಧಾರ್ಮಿಕವಾಗಿ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು.

ಸೋಮವಾರ ಜಾಗರ ಸಮರ್ಪಣೆ: ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಸಮುದಾಯದ ಹೆಣ್ಣು ಮಕ್ಕಳು ಜಾಗರವನ್ನು ದೇವಾಲಯಕ್ಕೆ ಸಮರ್ಪಿಸಲು ವಾದ್ಯ ಮೇಳಗಳ ಜೊತೆ ತೆರಳಿ ಬೆಟ್ಟಳ್ಳಿ ಮಾರಮ್ಮನಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ಜಾಗರ ಸಮರ್ಪಿಸಿದರು .

ವಿಶೇಷ ಹೂವಿನ ಅಲಂಕಾರ: ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿತ್ತು.

ತಂಪು ಜ್ಯೋತಿ ಸಮರ್ಪಣೆ: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಎರಡನೇ ದಿನ ಬೆಳಗಿನ ಜಾವ 5ರಿಂದ ದೇವಾಲಯಕ್ಕೆ ಹೆಣ್ಣು ಮಕ್ಕಳು ತಂಪು ಜ್ಯೋತಿಯನ್ನು ತಂದು ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸುವಂತೆ ಬೆಟ್ಟಳ್ಳಿ ಮಾರಮ್ಮನಿಗೆ ಪೂಜೆ ಸಲ್ಲಿಸಿದರು.

ಭಕ್ತ ಸಮೂಹ: ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಬೆಂಗಳೂರು, ಮೈಸೂರು ಹಾಗೂ ತಮಿಳುನಾಡಿನಿಂದಲೂ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾರಮ್ಮನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿವಿಸುವಂತೆ ಪ್ರಾರ್ಥನೆ ಸಲ್ಲಿಸಿದರು.

ಸೂಕ್ತ ಬಂದೋಬಸ್ತ್: ಮಂಗಳವಾರ ನಡೆದ ತಂಪು ಜ್ಯೋತಿ ಹಾಗೂ ಪ್ರಥಮ ರಥೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ದೇವಾಲಯ ಮುಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ರಥೋತ್ಸವ ನಡೆಯುವ ವೇಳೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಬಿಗಿ ಪಹರೆ ಏರ್ಪಡಿಸಲಾಗಿತ್ತು.

Share this article