ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಐತಿಹಾಸಿಕ ನವವೃಂದಾವನ ಗಡ್ಡಿಯಲ್ಲಿ ಶ್ರೀ ಕವೀಂದ್ರ ತೀರ್ಥರ ಮೂಲವೃಂದಾವನದಲ್ಲಿ ಶ್ರೀ ಕವೀಂದ್ರತೀರ್ಥರ ಪೂರ್ವಾರಾಧನೆ ವಿಜೃಂಭಣೆಯಿಂದ ನಡೆಯಿತು. ಉತ್ತರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರಿಂದ ಪೂಜಾ ಕೈಂಕರ್ಯ ನೆರವೇರಿತು.ಮಂಗಳವಾರ ಪೂರ್ವಾರಾಧನಾ ಮಹೋತ್ಸವದ ಅಂಗವಾಗಿ ಪ್ರಾತಃ ಪ್ರಾರ್ಥನೆಯೊಂದಿಗೆ ದಂಡೋದಕ, ಪಾದೋದಕಾದಿ ಸ್ನಾನಗಳು, ಶ್ರೀಮನ್ ನ್ಯಾಯಸುಧಾ ಪಾಠ, ಭಕ್ತಾಧಿಗಳಿಗೆ ಮುದ್ರಾಧಾರಣೆ, ಜ್ಞಾನ ಸತ್ರ ಕಾರ್ಯಕ್ರಮ, ಉತ್ತರಾದಿಮಠದ ಸಂಸ್ಥಾನ ಪೂಜೆ ಹಾಗೂ ಮೂಲರಾಮಾದಿ 28 ಪ್ರತಿಮೆಗಳ ಸಂಸ್ಥಾನ ಪೂಜೆ, ವಿದ್ಯಾರ್ಥಿಗಳ ಅನುವಾದ, ಪಂಡಿತರಿಂದ ಉಪನ್ಯಾಸ, ನಂತರ ಆರಾಧನಾ ಪುರುಷರಾದ ಶ್ರೀ ಕವೀಂದ್ರತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ನಂತರ ಹಸ್ತೋದಕ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮ ನಡೆದವು.
ಸಂಜೆ ಶ್ರೀ ಸತ್ಯಾತ್ಮ ತೀರ್ಥರಿಂದ ಭಕ್ತರಿಗೆ ಅನುಗ್ರಹ ಸಂದೇಶ, ವಿದ್ಯಾರ್ಥಿಗಳ ಅನುವಾದ, ವೇದಾಂತ ಗ್ರಂಥಗಳ ಪಾಠ, ಸ್ವಸ್ತಿವಾಚನ ನಡೆದವು. ಇದೇ ಸಂದರ್ಭದಲ್ಲಿ ಉತ್ತರಾದಿಮಠದ ಪರಂಪರೆಯ ಪೂರ್ವ ಯತಿಗಳಾದ ಶ್ರೀ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರ ಮಧ್ಯಾರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸಗಳು, ಪ್ರವಚನ, ದೀಪೋತ್ಸವ ನಡೆಯಿತು.ಕಾರ್ಯಕ್ರಮದಲ್ಲಿ ಪಂಡಿತ ವಿದ್ಯಾದೀಶಾಚಾರ್ಯ ಗುತ್ತಲ್, ಮಠದ ದಿವಾನರಾದ ಶಶಿ ಆಚಾರ್ಯ, ರಾಮಚಾರ್ಯ ಉಮರ್ಜಿ, ಆನಂದಾಚಾರ್ಯ ಜೋಶಿ ಅಕ್ಕಲಕೋಟೆ, ನಾರಾಯಣಾಚಾರ್ಯ ಜೋಶಿ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಆನಂದತೀರ್ಥಾಚಾರ್ ಹುಲಿಗಿ, ನಾರಾಯಣಾಚಾರ್ಯ ಹುಲಿಗಿ, ಪ್ರಸನ್ನಾಚಾರ್ಯ ಕಟ್ಟಿ, ಮಠದ ಮುಖ್ಯಸ್ಥರಾದ ಬಳ್ಳಾರಿ ರಾಘವೇಂದ್ರಾಚಾರ್ಯ, ಅಡವಿರಾವ್ ಕಲಾಲಬಂಡಿ, ಶ್ಯಾಮಾಚಾರ್ ಜೋಶಿ, ಉಪೇಂದ್ರಾಚಾರ್ ಕೇಸಕ್ಕಿ, ಕೃಷ್ಣಾಚಾರ್, ಸತ್ಯಭೋದಾಚಾರ್, ಜಯಸಿಂಹಾಚಾರ್ ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಇಂದು ಮಧ್ಯಾರಾಧನೆ:ಉಚ್ಚ ನ್ಯಾಯಾಲಯದ ಆದೇಶದ ಅನುಸಾರ ನವವೃಂದಾವನ ಗಡ್ಡಿಯಲ್ಲಿ ಉತ್ತರಾದಿಮಠದಿಂದ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಂಗಳವಾರ ನೆರವೇರಿತು. ಬುಧವಾರ ಮಧ್ಯಾರಾಧನೆಯ ಸಂದರ್ಭದಲ್ಲಿ ಶ್ರೀರಾಮನವಮಿ ಪ್ರಯುಕ್ತ ಮೂಲ ಸೀತಾ ಸಮೇತ ದಿಗ್ವಿಜಯ ಮೂಲರಾಮಚಂದ್ರದೇವರಿಗೆ ಶ್ರೀಗಳಿಂದ ವಿಶೇಷ ಪಂಚಾಮೃತಾಭಿಷೇಕ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಯ ಒಳಗೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಪೂರ್ಣಗೊಳ್ಳಲಿದ್ದು, ಸಕಲ ಭಕ್ತರು ಭಾಗವಹಿಸಿ ಶ್ರೀರಾಮದೇವರು ಮತ್ತು ಯತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಉತ್ತರಾದಿಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ ತಿಳಿಸಿದ್ದಾರೆ.