ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork | Published : Dec 2, 2024 1:15 AM

ಸಾರಾಂಶ

ಶರಣೆ ದಾನಮ್ಮದೇವಿಯ ಆಶೀರ್ವಾದ ತಮ್ಮೆಲ್ಲರ ಮೇಲಿದ್ದು ಯಾವುದೇ ಕಾರಣಕ್ಕೂ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವ ಭರವಸೆಯಿದೆ. ಅದಾಗ್ಯೂ ಇಲ್ಲಿ ಪಾಲ್ಗೊಂಡಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಸಲಹೆ ನೀಡಿದರು.

ಬ್ಯಾಡಗಿ: ಶರಣೆ ದಾನಮ್ಮದೇವಿಯ ಆಶೀರ್ವಾದ ತಮ್ಮೆಲ್ಲರ ಮೇಲಿದ್ದು ಯಾವುದೇ ಕಾರಣಕ್ಕೂ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವ ಭರವಸೆಯಿದೆ. ಅದಾಗ್ಯೂ ಇಲ್ಲಿ ಪಾಲ್ಗೊಂಡಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ಸಲಹೆ ನೀಡಿದರು.

ಪಟ್ಟಣದ ನೆಹರು ನಗರದಲ್ಲಿರುವ ದಾನಮ್ಮದೇವಿ ದೇವಸ್ಥಾನದ 13ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚೊಚ್ಚಲ ಬಾಣಂತಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಗರ್ಭಾವಸ್ಥೆಯಲ್ಲಿ ತಾಯಂದಿರು ಮಾಡುವ ಎಲ್ಲ ಚಟುವಟಿಕೆಗಳು ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ, ಇದೊಂದು ವೈಜ್ಞಾನಿಕ ಸಲಹೆ ಕೂಡ ಇದ್ದು, ಗರ್ಭಿಣಿ ಮಹಿಳೆಯರು ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವಂತೆ ಕರೆ ನೀಡಿದರು.

ಸಂತರ ಮಹಂತರ ಪ್ರವಚನ ನಾವು ಅವಶ್ಯವಾಗಿ ಕೇಳಬೇಕು: ಸಂತರ ಮಹಂತರ ಪ್ರವಚನಗಳನ್ನು ನಾವು ಅವಶ್ಯವಾಗಿ ಕೇಳಬೇಕು, ಕೇಳಿ ಮೈಗೂಡಿಸಿಕೊಳ್ಳಬೇಕು, ಅಷ್ಟೇ ಏಕೆ ಆತ್ಮಸಾಕ್ಷಾತ್ ಮಾಡಿಕೊಳ್ಳಬೇಕು, ನಾವು ಮಹಾತ್ಮರ ಉಪದೇಶ ಕೇಳಿದ ನಂತರ ಏಕಾಂತ ಸ್ಥಳಕ್ಕೆ ಹೋಗಬೇಕು, ಅಲ್ಲಿ ಧ್ಯಾನಸ್ಥರಾಗಿ ಅವರ ಉಪದೇಶವನ್ನೆಲ್ಲ ಸುಮ್ಮನೆ ಮೆಲುಕು ಹಾಕಿದಾಗ ನಮಗೆ ವಿಲಕ್ಷಣ ಆನಂದ ಉಂಟಾಗುತ್ತದೆ ಎಂದರು.

ಧರ್ಮಗಳ ಮಾತಿನ ಸಮರ ತಾರಕಕ್ಕೇರಿವೆ:ಸಾನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರಶ್ರೀಗಳು ಮಾತನಾಡಿ, ಧರ್ಮದ ಉಪದೇಶಗಳು ವೈಜ್ಞಾನಿಕ ಚಿಂತನೆಗಳೊಂದಿಗೆ, ವಾಸ್ತವಿಕ ಬದುಕಿಗೆ ಹತ್ತಿರವಿರಬೇಕು ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧರ್ಮಗಳ ನಡುವಿನ ಮಾತಿನ ಸಮರ ತಾರಕಕ್ಕೇರಿವೆ, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು ಸಾಮಾಜಿಕ ಪರಿಣಾಮಗಳು ಇನ್ನಷ್ಟು ಹೆಚ್ಚಾಗುವ ಮುನ್ನವೇ ನಮ್ಮಲ್ಲೇ ಕಡಿವಾಣ ಹಾಕಿಕೊಳ್ಳಬೇಕಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಪ್ರಸ್ತಾಪಿಸಿದ್ದರು: ಧರ್ಮಗಳು ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡು ಪರಸ್ಪರ ಸಂಯೋಜನೆಯೊಂದಿಗೆ ನಡೆಯಬೇಕು ಎಂದು 1893 ರಲ್ಲಿ ನಡೆದ ವಿಶ್ವಧರ್ಮಗಳ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ, ಹೀಗಾಗಿ ಧಾರ್ಮಿಕ ಭಾಷಣಗಳು ಸಮಾಜವನ್ನು ಒಗ್ಗೂಡಿಸುವ ಪ್ರಮುಖ ಸಂಪನ್ಮೂಲವಾಗಬೇಕು ಎಂದರು. ಈ ಸಂದರ್ಭದಲ್ಲಿ ಡಾ.ಎಸ್.ಎನ್.ನಿಡಗುಂದಿ, ರಾಜು ಮೋರಿಗೇರಿ, ಚಂದ್ರಶೇಖರ ಅಂಗಡಿ, ಸುಧೀರ ಹವಳದ, ಬಸವರಾಜ ಹಂಜಿ, ಅಶೋಕ ಮೂಲಿಮನಿ ಮಹೇಶ್ವರಿ ಪಸಾರದ, ಅನುರಾಧ ಮೋರಿಗೇರಿ ಸೇರಿದಂತೆ ಇನ್ನಿತರರಿದ್ದರು.

Share this article