ಕೃಷ್ಣಾ ಆರತಿ, ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

KannadaprabhaNewsNetwork |  
Published : Aug 15, 2025, 01:02 AM IST
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಅ.16 ರಂದು ನಡೆಯಲಿರುವ ಕೃಷ್ಣಾ ಆರತಿ ಕಾರ್ಯಕ್ರಮಕ್ಕೆ ಸಿದ್ದತೆ ಗಳು ಪ್ರಾರಂಭ ಗೊಂಡಿವೆ | Kannada Prabha

ಸಾರಾಂಶ

ಆಗಸ್ಟ್‌ 16ರಂದು ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಪುಣ್ಯ ಗದ್ದುಗೆ ಸ್ಥಳ, ಉತ್ತರ ವಾಹಿನಿ ಕೃಷ್ಣೆಯ ತೀರದಲ್ಲಿ ಎಂಆರ್‌ಎನ್‌ ಫೌಂಡೇಷನ್‌ ಹಾಗೂ ತಾಲೂಕಿನ ರೈತರ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ, ಕುಂಭ ಮೇಳ ಮಾದರಿಯಲ್ಲಿ ನಾಗಾ ಸಾಧುಗಳ, ಸಂತರ ಸಮ್ಮಿಲನ, ಮಾಜಿ ಸಚಿವ ಮುರುಗೇಶ ನಿರಾಣಿ ಅವರ 60ನೇ ವರ್ಷದ ಜನ್ಮದಿನ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಮಠದ ಆವರಣವನ್ನು ಸಿಬ್ಬಂದಿ ಸ್ವಚ್ಛಗೊಳಿಸುವುದು, ಕೃಷ್ಣೆಯ ಸ್ನಾನಘಟ್ಟ ಸ್ಥಳದ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಆಗಸ್ಟ್‌ 16ರಂದು ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಪುಣ್ಯ ಗದ್ದುಗೆ ಸ್ಥಳ, ಉತ್ತರ ವಾಹಿನಿ ಕೃಷ್ಣೆಯ ತೀರದಲ್ಲಿ ಎಂಆರ್‌ಎನ್‌ ಫೌಂಡೇಷನ್‌ ಹಾಗೂ ತಾಲೂಕಿನ ರೈತರ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ, ಕುಂಭ ಮೇಳ ಮಾದರಿಯಲ್ಲಿ ನಾಗಾ ಸಾಧುಗಳ, ಸಂತರ ಸಮ್ಮಿಲನ, ಮಾಜಿ ಸಚಿವ ಮುರುಗೇಶ ನಿರಾಣಿ ಅವರ 60ನೇ ವರ್ಷದ ಜನ್ಮದಿನ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಮಠದ ಆವರಣವನ್ನು ಸಿಬ್ಬಂದಿ ಸ್ವಚ್ಛಗೊಳಿಸುವುದು, ಕೃಷ್ಣೆಯ ಸ್ನಾನಘಟ್ಟ ಸ್ಥಳದ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಕಾರ್ಯಕ್ರಮ ನಡೆಯುವ ಸ್ಥಳದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಪಾರ್ಕಿಂಗ್‌ ಸ್ಥಳ ಸ್ವಚ್ಛಗೊಳಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಕೃಷ್ಣಾ ಆರತಿ ನಡೆಸಿಕೊಡಲು ಕಾಶಿ ಕ್ಷೇತ್ರದಿಂದ ಆಗಮಿಸುವ ಅರ್ಚಕರ 11 ತಂಡಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಕೃಷ್ಣಾ ನದಿ ತೀರದಲ್ಲಿ ಸಾರ್ವಜನಿಕರು ಹಾಗೂ ವಿಐಪಿಗಳು ಆರತಿ ಕಾರ್ಯಕ್ರಮ ವೀಕ್ಷಿಸಲು ಬೃಹದಾಕಾರದ ವೇದಿಕೆ ನಿರ್ಮಿಸಲಾಗುತ್ತಿದೆ. ಆರತಿ ಮಾಡುವ ಅರ್ಚಕರಿಗೆ ವೇದಿಕೆ ನಿರ್ಮಿಸಲಾಗಿದ್ದು, ಎತ್ತರದ ಸ್ಥಳದ ಮೇಲೆ ನಿಂತು ಆರತಿ ಮಾಡಲು ಅನುಕೂಲ ಕಲ್ಪಿಸಲಾಗುತ್ತಿದೆ. ಇದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಆರತಿ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಬೃಹದಾಕಾರದ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಹುಟ್ಟುಹಬ್ಬವನ್ನು ಅಚರಿಸಲು ಸಿದ್ಧತೆಗಳು ನಡೆದಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ದೂರದ ಊರುಗಳಿಂದ ಬರುವ ವ್ಯಾಪಾರಿಗಳು ಸಾರ್ವಜನಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ರಾರಾಜಿಸುತ್ತಿವೆ ಕಟೌಟ್‌ಗಳು;ಜಮಖಂಡಿ, ಅಥಣಿ, ರಬಕವಿ-ಬನಹಟ್ಟಿ, ಬೀಳಗಿ, ಮುಧೋಳ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಬೃಹದಾಕಾರದ ಕಟೌಟ್‌ಗಳು, ಕಾರ್ಯಕ್ರಮ ಮಾಹಿತಿ ಫಲಕಗಳು, ಕಮಾನುಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸಲಾಗಿದೆ. ಗ್ರಾಮ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ. ವಿದ್ಯುತ್‌ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯಕ್ಕೆ ಗುರುವಾರದಿಂದಲೇ ಚಾಲನೆ ನೀಡಲಾಗಿದೆ.

ನೂರಕ್ಕೂ ಅಧಿಕ ನಾಗಾ ಸಾಧುಗಳು:ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನ ನಾಗಾಸಾಧುಗಳು, ಆಘೋರಿಗಳು, ಹಠಯೋಗಿಗಳು ಭಾಗವಹಿಸಲಿದ್ದು, ಅವರನ್ನು ಗ್ರಾಮದ ಪ್ರಮುಖ ಬೀದಿಗಳಿಂದ ಡೊಳ್ಳು, ಝಾಂಜ್‌ ಪಥಕ್‌ ಮುಂತಾದ ವಾದ್ಯಗಳ ಸಮೇತ ಬರಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ನಾಗಾ ಸಾಧುಗಳು ಕೃಷ್ಣಾ ಪುಣ್ಯಸ್ನಾನ ಮಾಡಲಿದ್ದು, ತಮ್ಮ ಪೂಜಾದಿ ಕೈಂಕರ್ಯಗಳನ್ನು ಕೈಗೊಂಡು ಸಾರ್ವಜನಿಕರನ್ನು ಆಶೀರ್ವದಿಸಲಿದ್ದಾರೆ. ಅವರ ಆಗಮನದಿಂದ ಸ್ಥಳದ ಪವಿತ್ರವಾಗಲಿದೆ ಎಂಬ ನಂಬಿಕೆ ಇದೆ.

ಪ್ರಯಾಗರಾಜ ಕ್ಷೇತ್ರ ಮಾದರಿ:ಸ್ಥಳೀಯರು ಪ್ರಯಾಗರಾಜ ಕ್ಷೇತ್ರಕ್ಕೆ ಹೋಗಿ ಮಹಾ ಕುಂಭಮೇಳ ವೀಕ್ಷಿಸಲು ಸಾಧ್ಯವಾಗದವರಿಗೆಂದೇ ಇದೊಂದು ಅವಕಾಶವನ್ನು ಎಂಆರ್‌ಎನ್‌ ಫೌಂಡೇಷನ್‌ ಕಲ್ಪಿಸಿದೆ. ಇದರಿಂದ ಸ್ಥಳೀಯರು ಸಹ ಕುಂಭಮೇಳವನ್ನು ಸಾಕ್ಷಾತ್‌ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಮುಖಂಡರು. ನಾಗಾಸಾಧುಗಳ ಅನುಷ್ಠಾನ ಕ್ರಮಗಳು, ಆಶೀರ್ವಾದ, ಕೃಷ್ಣಾ ಪುಣ್ಯಸ್ನಾನ, ಶ್ರೀಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮಗಳು ಸ್ಥಳೀಯರಿಗೆ ಹಬ್ಬದ ರಸದೌತಣ ನೀಡಲಿವೆ. ಸುತ್ತಲಿನ ಗ್ರಾಮಗಳ ಸುಮಾರು ಇನ್ನೂರಕ್ಕೂ ಅಧಿಕ ದೇವರ ಪಲ್ಲಕ್ಕಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಬೆಳಗಿನಿಂದಲೇ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ತಡರಾತ್ರಿಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಮಾರ್ಗಗಳು : ಹಿಪ್ಪರಗಿ ಗ್ರಾಮಕ್ಕೆ ದೂರದ ಊರುಗಳಿಂದ ಬರುವರಿಗೆ ಮೀರಜ್‌ನಿಂದ 70 ಕಿಮೀ, ಅಥಣಿಯಿಂದ 30 ಕಿಮೀ, ಮುಧೋಳದಿಂದ 34 ಕಿಮೀ, ವಿಜಯಪುರದಿಂದ ಜಮಖಂಡಿ ಮಾರ್ಗವಾಗಿ 77 ಕಿಮೀ, ವಿಜಯಪುರ ದಿಂದ ಸಾವಳಗಿ ಮಾರ್ಗವಾಗಿ 80 ಕಿಮೀ, ಮಹಲಿಂಗಪುರ ದಿಂದ 22 ಕಿಮೀ, ಹಾಗೂ ಜಮಖಂಡಿಯಿಂದ 12 ಕಿಮೀ. ದೂರವಿದ್ದು ಹಿಪ್ಪರಗಿ ಗ್ರಾಮದಲ್ಲಿ ನಡೆಯಲಿವ ಕುಂಭ ಮೇಳ. ಕೃಷ್ಣಾ ಪುಣ್ಯ ಸ್ನಾನ, ಕೃಷ್ಣಾ ಆರತಿ, ನಾಗಾಸಾಧುಗಳ ದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ ಇದೊಂದು ಉತ್ತಮ ಅವಕಾಶ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

PREV

Recommended Stories

ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ
ಇಲೆಕ್ಟ್ರಾನಿಕ್ ಸಿಟಿ ಮೆಟ್ರೋದಿಂದ ಫೀಡರ್ ಬಸ್