ಬರದ ನಡುವೆಯೂ ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಸಿದ್ಧತೆ

KannadaprabhaNewsNetwork | Updated : Jan 15 2024, 05:44 PM IST

ಸಾರಾಂಶ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಬರದ ನಡುವೆಯೂ ಜಿಲ್ಲಾದ್ಯಂತ ಜನರು ಸಿದ್ಧತೆಯಲ್ಲಿ ತೊಡಗಿದರು. ಈ ವರ್ಷ ಎಳ್ಳು-ಬೆಲ್ಲದ ಸವಿಯ ಜತೆಗೆ ಬೇವಿನ ಕಹಿಯನ್ನೂ ತಂದಿದೆ. ಇದ್ದ ಅಲ್ಪಸ್ವಲ್ಪ ಬೆಳೆಗಳ ಒಕ್ಕಣೆ ಮುಗಿಸಿ ಸಂಕ್ರಾಂತಿಯ ಹಬ್ಬ ಆಚರಣೆಗೆ ಸಿದ್ಧರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ 

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಬರದ ನಡುವೆಯೂ ಜಿಲ್ಲಾದ್ಯಂತ ಜನರು ಸಿದ್ಧತೆಯಲ್ಲಿ ತೊಡಗಿದರು. ಈ ವರ್ಷ ಎಳ್ಳು-ಬೆಲ್ಲದ ಸವಿಯ ಜತೆಗೆ ಬೇವಿನ ಕಹಿಯನ್ನೂ ತಂದಿದೆ. 

ಇದ್ದ ಅಲ್ಪಸ್ವಲ್ಪ ಬೆಳೆಗಳ ಒಕ್ಕಣೆ ಮುಗಿಸಿ ಸಂಕ್ರಾಂತಿಯ ಹಬ್ಬ ಆಚರಣೆಗೆ ಸಿದ್ಧರಾಗಿದ್ದಾರೆ. ಅದರಂತೆ ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದಲ್ಲಿ ಖರೀದಿ ಭರಾಟೆ ಜೋರಾಗಿತ್ತು. 

ಮಳೆಯ ಕೊರತೆಯಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬರ ಆವರಿಸಿದೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಸುಗ್ಗಿಯ ಸಂಭ್ರಮ ಅಷ್ಟಾಗಿ ಕಾಣದಿದ್ದರೂ, ಸಂಪ್ರದಾಯದ ಹಬ್ಬ ಆಚರಣೆಗೆ ಸಿದ್ಧತೆಯಲ್ಲಿದ್ದಾರೆ. 

ಬರ, ನೀರಿನ ಅಲಭ್ಯತೆಯಿಂದ ಬೆಳೆದ ಬೆಳೆಯೂ ಒಣಗಿ ಬೆಳೆನಷ್ಟ ಸಂಭವಿಸಿದೆ. ನೀರಿನ ಕೊರತೆ ನಡುವೆಯೂ ಅಲ್ಪಸ್ವಲ್ಪ ಬೆಳೆ ಉಳಿಸಿಕೊಂಡಿರುವ ಕೆರೆ, ಪಂಪ್‌ಸೆಟ್ ಆಶ್ರಿತ ಹಾಗೂ ನದಿಯಂಚಿನ ಜಮೀನುಗಳ ರೈತರ ಕೈಗೆ ಒಂದಷ್ಟು ಫಸಲು ಸಿಕ್ಕಿದೆ. 

ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆಯಿದೆ. ಆದರೆ, ಖರೀದಿ ಕೇಂದ್ರಗಳನ್ನು ಸಕಾಲದಲ್ಲಿ ತೆರೆಯದ ಕಾರಣ ರೈತರು ಬೆಳೆದ ಫಸಲು ಬಹುತೇಕ ಮಧ್ಯವರ್ತಿಗಳ ಪಾಲಾಗಿದೆ.ಸುಗ್ಗಿಯ ಸಂಕೇತವಾದ ಸಂಕ್ರಾಂತಿ ಹಬ್ಬದಲ್ಲಿ ರಾಸುಗಳಿಗೆ ಹೆಚ್ಚು ಮಾನ್ಯತೆ. 

ಹೀಗಾಗಿ ರೈತರು ತಮ್ಮ ಬೆನ್ನೆಲುಬಾದ ಎತ್ತುಗಳು, ಜಾನುವಾರುಗಳನ್ನು ಸಿಂಗರಿಸಲು ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಸಂಕ್ರಾಂತಿ ಪ್ರಯುಕ್ತ ನಗರದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ರಥದ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣಗಳಲ್ಲಿ . ಹಣ್ಣು, ಹೂವು ತರಕಾರಿ, ದಿನಸಿ ವಸ್ತುಗಳು, ಮಕ್ಕಳಿಗೆ ಹೊಸ ಉಡುಪುಗಳನ್ನು ಖರೀದಿಸಿದರು.

 ಕಬ್ಬನ್ನು ಅಗತ್ಯಕ್ಕೆ ತಕ್ಕಂತೆ ಖರೀದಿಸಿದರೆ, ಹೆಣ್ಣು ಮಕ್ಕಳು ಎಳ್ಳು ಬೀರಲು ಉಪಯೋಗಿಸುವ ಸಕ್ಕರೆ ಅಚ್ಚು, ಬಿಳಿ ಎಳ್ಳು, ಬೆಲ್ಲ, ಕೊಬ್ಬರಿಯನ್ನು ಖರೀದಿಸಿದರು.

Share this article