ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಶ್ರದ್ಧಾಪೂರ್ಣ ಅಧ್ಯಯನ, ಉತ್ಸಾಹ ಪೂರ್ಣ ಆಲೋಚನೆ ಹಾಗೂ ಅನನ್ಯ ಶಕ್ತಿ ಸಾಮರ್ಥ್ಯಗಳಿರುವ ಯುವಜನತೆ ಎದುರು ನೋಡುತ್ತಿರುವ ಭಾರತಾಂಬೆಗೆ ವಿಶ್ವಮಾನ್ಯತೆ ತಂದು ಕೊಡಲು ವ್ಯಯಕ್ತಿಕ ಬದುಕಿನ ಸುಖ ಭೋಗಗಳನ್ನು ತಿರಸ್ಕರಿಸಿ, ಪರರ ಒಳಿತಿಗೆ ದುಡಿಯಲು ಹಂಬಲಿಸುವ ಮನಗಳಿಗೆ, ಸೂಕ್ತ ಸೇವಾ ಕ್ಷೇತ್ರಗಳನ್ನು ನೀಡಿ ಗೌರವಿಸುವ ವ್ಯವಸ್ಥೆ ರೂಪಿಸುವ ಜವಾಬ್ದಾರಿ ಹಿರಿಯರು ತೆಗೆದುಕೊಂಡಲ್ಲಿ ಮಾತ್ರ ಯುವಶಕ್ತಿಯ ಸದ್ವಿನಿಯೋಗ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮಾತನಾಡಿ, ಇಚ್ಛೆ ಮತ್ತು ಬಯಕೆಗಳಿಗೆ ಸರಿಹೊಂದುವ ಆದರ್ಶಗಳು, ಭಾವನಾತ್ಮಕ ಕ್ರಿಯೆಗಳ ಲಭ್ಯತೆಯಿಂದ ವಂಚಿತರಾಗುವ ಯುವಜನತೆ ಉದ್ವೇಗ, ಹಿಂಸೆ, ಅಸಹಾಯಕತೆ, ನಿರುತ್ಸಾಹಗಳಂತಹ ಮಾರಕ ಭಾವನೆಗಳಿಗೆ ತುತ್ತಾಗಿ, ಸಮಾಜ ದ್ರೋಹಿ ಶಕ್ತಿಗಳಾಗಿ ರೂಪುಗೊಳ್ಳುತ್ತಿರುವುದನ್ನು ತಡೆದು, ಉತ್ಪಾದಕ ಶಕ್ತಿಯನ್ನಾಗಿಸಲು ವಿವೇಕಾನಂದರ ಚಿಂತನೆಗಳೇ ಚಿಕಿತ್ಸಕ ಸಾಧನಗಳಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ತ್ಯಾಗ ಮತ್ತು ಸೇವೆಗಳ ಮಹತ್ವ ತಿಳಿಸಿಕೊಟ್ಟು. ಕುಸಿಯುತ್ತಿರುವ ಜನರ ಉದ್ದಾರಕ್ಕೆ ಯುವಜನತೆ ಆಸರೆಯಾಗಿ ನಿಲ್ಲಬೇಕು. ವಿವೇಕಾನಂದರು ನಡೆಸಿದ ಸತ್ಯ ಶೋಧಕ ಆಂದೋಲನ ಇಂದಿನ ಯುವಜನಾಂಗಕ್ಕೆ ದಾರಿದೀಪ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾದ ಅರವಿಂದ ಕೊಪ್ಪರವರನ್ನು ತಾಲೂಕು ಆಸ್ಪತ್ರೆಯ ವತಿಯಿಂದ ಸನ್ಮಾನಿಸಿದರು. ವೇದಿಕೆಯ ಮೇಲೆ ಅರಿಹಂತ ಬಿ.ಎಸ್.ಡಬ್ಲೂ ಕಾಲೇಜು ಪ್ರಾಚಾರ್ಯ ವಿಫುಲ ಸಗರಿ, ನ್ಯಾಯವಾದಿ ರಶ್ಮಿ ಕುಲಕರ್ಣಿ, ತಾಲೂಕು ಆಸ್ಪತ್ರೆ ಪ್ರಯೋಗಾಲಯದ ಹಿರಿಯ ತಾಂತ್ರಿಕ ಅಧಿಕಾರಿ ವಿ.ವಿ ಪವಾಡಶೆಟ್ಟಿ ಇದ್ದರು.
ಉಪನ್ಯಾಸಕ ಅಶೋಕ ಹಡಪದ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸ ರಾಜು ನಲವಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಬಸವರಾಜ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ಕಟ್ಟಿ ವಂದಿಸಿದರು.