ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗಿಕರಣ ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆ ಬಲಪಡಿಸಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿ ಜಾರಿಗೊಳಿಸಬಾರದು ಎಂದು ಎಚ್.ಎಸ್.ಸುನಂದ ಒತ್ತಾಯಿಸಿದರು.
ದೊಡ್ಡಬಳ್ಳಾಪುರ: ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗಿಕರಣ ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆ ಬಲಪಡಿಸಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿ ಜಾರಿಗೊಳಿಸಬಾರದು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಎಚ್ಎಸ್ ಸುನಂದ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಿಐಟಿಯು ತಾಲೂಕು ಸಮಿತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಎರಡು ಕೋಟಿ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಕನಿಷ್ಠ ವೇತನವನ್ನು ಕುಶಲ ಕಾರ್ಮಿಕರಿಗೆ ₹31,000 ಹಾಗೂ ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ.15 ಹೆಚ್ಚಳದೊಂದಿಗೆ ನಿಗದಿಪಡಿಸಬೇಕು.
ಗ್ರಾಹಕ ಬೆಲೆ ಸೂಚ್ಯಂಕದ ಪ್ರತಿ ಅಂಶದ ಹೆಚ್ಚಳಕ್ಕೆ ಪ್ರತಿ ದಿನಕ್ಕೆ 6 ಪೈಸೆಗಳ ತುಟ್ಟಿಭತ್ಯೆ ನಿಗದಿಪಡಿಸಬೇಕು. ಬೆಲೆ ಸೂಚ್ಯಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು. ಸುಪ್ರೀಂ ನ್ಯಾಯಾಲಯದ ತೀರ್ಪಿನ ಅನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಠ ವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಟ 36 ಗಂಟೆಗಳು, ದಿನದ ಪಾಳಿಯನ್ನು 6 ಗಂಟೆಗಳಿಗೆ ಮಿತಿಗೊಳಿಸಬೇಕು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ಸಂವಿಧಾನದ ಪರಿಚ್ಛೇದ 39 (ಡಿ) ಅಡಿಯಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿ ಪಡಿಸಬೇಕು.
ಕಡಿಮೆ ವೇತನ ನೀಡುತ್ತಾ ಗುತ್ತಿಗೆ, ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆ ಕೊನೆಗಾಣಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಹೊರೆ ತಗ್ಗಲಿ: 3 ರಿಂದ 6 ಪ್ರಾಯದ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕ ಪೂರ್ವ ಪ್ರಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಅಗತ್ಯವಾದ ಕಾನೂನು, ಸೌಲಭ್ಯ ಒದಗಿಸಬೇಕು.
ರಾಜ್ಯದಲ್ಲಿ ಚುನಾವಣೆ, ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಗೃಹಲಕ್ಷ್ಮಿ ಮುಂತಾದ ಐಸಿಡಿಎಸ್ ಯೋಜನೆಗೆ ಹೊರತಾದ ಕೆಲಸಗಳ ಹೊರೆಯನ್ನು ಅಂಗನವಾಡಿ ನೌಕರರ ಮೇಲೆ ಹೇರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಳ: ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿ, ದೇಶದಲ್ಲಿ ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ.
ಇದರ ನಡುವೆ ನಿರುದ್ಯೋಗವು ಹೆಚ್ಚಾಗುತ್ತಿದೆ. ದುಡಿಯುವ ವರ್ಗದ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೋಟಿ ಸಹಿ ಸಂಗ್ರಹ ಆಂದೋಲನ ನಡೆಸಲಾಗುತ್ತಿದೆ ಎಂದರು.
ಆಂದೋಲನದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಲ್.ಆರ್.ನಳಿನಾಕ್ಷಿ, ಸಿಐಟಿಯು ಮುಖಂಡರಾದ ಎಸ್.ರುದ್ರರಾದ್ಯ, ಮನೀಶ್‌ಶರ್ಮಾ, ಇನಾಯತ್‌ಪಾಷ, ಸಾದಿಕ್‌ಪಾಷ, ಎಜಾಜ್ ಮತ್ತಿತರರು ಭಾಗವಹಿಸಿದ್ದರು. 13ಕೆಡಿಬಿಪಿ2-
ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ತಾಲೂಕು ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ಕೇಂದ್ರದ ವಿರುದ್ದ ಎರಡು ಕೋಟಿ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಲಾಯಿತು.