ರಾಮನಗರ: ನಗರಸಭೆ ವತಿಯಿಂದ ಡಿ.22ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರೇಷ್ಮೆನಾಡ ಕನ್ನಡಹಬ್ಬ ಹೆಸರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ಡಿ.22ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕನ್ನಡ ತಾಯಿ ಭುವನೇಶ್ವರಿ ಮೂರ್ತಿಯ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ. ನಗರದ ಮಿನಿ ವಿಧಾನಸೌಧದಿಂದ ಆರಂಭವಾಗುವ ಮೆರವಣಿಗೆ ಹಳೇ ಬಸ್ ನಿಲ್ದಾಣ, ಮುಖ್ಯ ರಸ್ತೆ, ಎಂ.ಜಿ.ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣವನ್ನು ತಲುಪಲಿದೆ. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು, ನಗರಸಭೆಯ ವತಿಯಿಂದ ಟ್ಯಾಬ್ಲೊಗಳ ಆಕರ್ಷಣೆ ಇರಲಿದೆ ಎಂದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯಲ್ಲಿ ರೇಷ್ಮೆನಾಡು ಕನ್ನಡ ಹಬ್ಬವನ್ನು ಆಚರಿಸಲಾಗುವುದು. ಹೆಸರಾಂತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಜಾತಿ, ಧರ್ಮ, ಪಕ್ಷಾತೀತವಾಗಿ ನಡೆಯುವ ಕನ್ನಡ ಹಬ್ಬಕ್ಕೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.ರೇಷ್ಮೆನಾಡ ಕನ್ನಡ ಹಬ್ಬದ ಅಂಗವಾಗಿ ನಗರವನ್ನು ವಿದ್ಯುತ್ ದೀಪಗಳು ಮತ್ತು ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಮಿನಿ ದಸೆಯ ಮಾದರಿಯಲ್ಲಿ ಸಿಂಗರಿಸಲು ಉದ್ದೇಶಿಸಲಾಗಿದೆ. ನಾಗರೀಕರು ಸಹ ತಮ್ಮ ಮನೆ, ಅಂಗಡಿಗಳ ಕಟ್ಟಡಗಳನ್ನು ಸಿಂಗರಿಸಿ, ಇಡೀ ನಗರವನ್ನು ಕನ್ನಡಮಯವನ್ನಾಗಿಸಿ, ಮನೆಯಲ್ಲಿ ನಡೆಯುವ ಹಬ್ಬದಂತೆ ನಾಡ ಹಬ್ಬವನ್ನು ಆಚರಿಸಿ ಎಂದು ನಗರದ ಸಮಸ್ತ ನಾಗರಿಕರಲ್ಲಿ ಮನವಿ ಮಾಡಿದರು.
ರಾಮನಗರ ಕ್ಷೇತ್ರದ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, 1968ರಿಂದ ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡಿದ 84 ವರ್ಷದ ಸಿ.ಎಂ.ಲಿಂಗಪ್ಪ ಅವರಿಗೆ ಪೌರ ಸನ್ಮಾನಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿ.ಎಂ.ಲಿಂಗಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 2 ಸಾವಿರಕ್ಕೂ ಆಶ್ರಯ ನಿವೇಶನಗಳನ್ನು ವಿತರಿಸಿದ್ದಾರೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಹೀಗೆ ಹತ್ತು ಹಲವು ಅತ್ಯುತ್ತಮ ಯೋಜನೆಗಳನ್ನು ಯಶಸ್ವಿಯಾಗಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಪೌರ ಸನ್ಮಾನ ಮಾಡಲಾಗುತ್ತಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸಹ ಗುರುತಿಸಿ ಗೌರವಿಸಿ ಪ್ರಶಸ್ತಿ ನೀಡಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.ನಗರದ ಪ್ರಮುಖರಾದ ಕೆ.ವಿ.ಉಮೇಶ್, ಆರ್.ವಿ.ಸುರೇಶ್, ಲಕ್ಷ್ಮಣ್ , ಪಿ.ಶಿವಾನಂದ, ಉದಯ್, ಪ್ರದೀಪ್, ವೆಂಕಟೇಶ್, ಹರೀಶ್‌ಬಾಲು, ರಾ.ಶಿ.ಬಸವರಾಜ್ , ನಾಗರಾಜ್ (ಬೆಂಕಿ) ಮತ್ತಿತರರು ತಮ್ಮ ಅಭಿಪ್ರಾಯ ಗಳು ಮತ್ತು ಸಲಹೆಗಳನ್ನು ವ್ಯಕ್ತಪಡಿಸಿದರು.
ಬಿ.ಎಂ.ಶ್ರೀನಿವಾಸ್ ಮತ್ತು ಲಕ್ಷ್ಮಣ್ ವೈಯಕ್ತಿಕವಾಗಿ ಆರ್ಥಿಕ ಸಹಕಾರ ಘೋಷಿಸಿದರು. ಸಭೆಯಲ್ಲಿ ನಗರಸಭಾ ಸದಸ್ಯರಾದ ಸೋಮಶೇಖರ್, ಗ್ಯಾಬ್ರಿಯಲ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.14ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ನಗರಸಭೆಯ ಸಭಾಂಗಣದಲ್ಲಿ ರೇಷ್ಮೆನಾಡ ಕನ್ನಡಹಬ್ಬ ಹೆಸರಿನಲ್ಲಿ ಆಯೋಜಿಸುತ್ತಿರುವ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಕೆ.ಶೇಷಾದ್ರಿ ಮಾತನಾಡಿದರು.