ತೆರಿಗೆ ವ್ಯಾಪ್ತಿಗೆ 7 ಲಕ್ಷ ಆಸ್ತಿ ಸೇರಿಸಲು ಸಿದ್ಧತೆ

KannadaprabhaNewsNetwork | Published : Jun 26, 2024 12:32 AM

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೇ ಇರುವ ಸುಮಾರು 5ರಿಂದ 7 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಬಿಬಿಎಂಪಿಯು ವಿಶೇಷ ಯೋಜನೆ ಜಾರಿಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೇ ಇರುವ ಸುಮಾರು 5ರಿಂದ 7 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಬಿಬಿಎಂಪಿಯು ವಿಶೇಷ ಯೋಜನೆ ಜಾರಿಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಗರದಲ್ಲಿ ಒಟ್ಟು 20 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಇನ್ನೂ ಸುಮಾರು 5 ರಿಂದ 7 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಈ ರೀತಿ ತೆರಿಗೆ ವ್ಯಾಪ್ತಿಗೆ ಸೇರದೇ ಇರುವ ಆಸ್ತಿಗಳಿಂದ ಬಿಬಿಎಂಪಿ ಯಾವುದೇ ಆದಾಯ ಬರುತ್ತಿಲ್ಲ. ಆದರೆ, ಬಿಬಿಎಂಪಿಯ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ಬಿಬಿಎಂಪಿಯು ಇದೀಗ ವಿಶೇಷ ಯೋಜನೆ ಜಾರಿಗೊಳಿಸುವುದಕ್ಕೆ ಮುಂದಾಗಿದೆ. ಇದರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ರೂಪದಲ್ಲಿ ಆದಾಯ ಹೆಚ್ಚಾಗಲಿದ್ದು, ಆಸ್ತಿ ಮಾಲೀಕರಿಗೂ ಹಲವು ಅನುಕೂಲವಾಗಲಿದೆ.

ವಿಶೇಷ ಯೋಜನೆ ಏನು?:

ಆಸ್ತಿ ತೆರಿಗೆಗೆ ಒಳಪಡದೇ ಇರುವ ಆಸ್ತಿಗಳಿಗೆ ಖಾತಾ ಇರುವುದಿಲ್ಲ. ಇದರಿಂದ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಇಲ್ಲ. ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೇ ಇರುವ ಆಸ್ತಿ ಮಾಲೀಕರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಆಸ್ತಿ ಮಾಲೀಕರು ಕಚೇರಿಗೆ ಅಲೆದಾಟ ಇರುವುದಿಲ್ಲ. ಆನ್‌ಲೈನ್‌ ಅರ್ಜಿ ಸಲ್ಲಿಕೆ ಮಾಡುತ್ತಿದಂತೆ ತಾತ್ಕಾಲಿಕವಾಗಿ ಆನ್‌ಲೈನ್‌ ತೆರಿಗೆ ಸಂಖ್ಯೆಯನ್ನು ಬಿಬಿಎಂಪಿಯಿಂದ ನೀಡಲಾಗುವುದು. ಆಗ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ತಡವಾಗಿ ಆಸ್ತಿ ತೆರಿಗೆ ಪಾವತಿಸುವ ಮೇಲೆ ಬಿಬಿಎಂಪಿವು ವಿಧಿಸುವ ದಂಡ ಮತ್ತು ಬಡ್ಡಿಯನ್ನು ಆಸ್ತಿ ಮಾಲೀಕರು ಉಳಿಕೆ ಮಾಡಬಹುದಾಗಿದೆ. ಆಸ್ತಿ ಮಾರಾಟ, ಖರೀದಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.3 ತಿಂಗಳಲ್ಲಿ ತೆರಿಗೆ ವ್ಯಾಪ್ತಿಗೆ

ಈ ರೀತಿ ಅರ್ಜಿ ಸಲ್ಲಿಕೆ ಮಾಡಿದ ಆಸ್ತಿ ಮಾಲೀಕರ ಆಸ್ತಿಗಳ ಪರಿಶೀಲನೆ ಕಾರ್ಯ ಹಾಗೂ ಅವರು ಈವರೆಗೆ ಕಟ್ಟಬೇಕಾದ ಆಸ್ತಿ ತೆರಿಗೆ ಮೊತ್ತ ಎಲ್ಲವನ್ನೂ ಮೂರು ತಿಂಗಳಲ್ಲಿ ಅಂತಿಮಗೊಳಿಸಿ ಮಾಲೀಕರಿಗೆ ಮಾಹಿತಿ ನೀಡಲಾಗುತ್ತದೆ. ಮಾಲೀಕರು ಈಗಾಗಲೇ ತಾತ್ಕಾಲಿಕ ತೆರಿಗೆ ಸಂಖ್ಯೆಯಡಿ ಪಾವತಿ ಮಾಡಿದ ಮೊತ್ತವೂ ಹೆಚ್ಚಾಗಿದ್ದರೆ, ಮುಂದಿನ ವರ್ಷದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಕಡಿಮೆಯಾಗಿದ್ದರೆ, ನೋಟಿಸ್‌ ನೀಡಿ ಪಾವತಿಗೆ ಸೂಚಿಸಲಾಗುತ್ತದೆ.

ಒಟಿಎಸ್‌ ಅನುಕೂಲಕ್ಕೆ ಅವಕಾಶ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಒಟಿಎಸ್‌ ಯೋಜನೆ ಜಾರಿಗೊಳಿಸಿದೆ. ಇದರಿಂದ ದಂಡ ಮೊತ್ತದಲ್ಲಿ ಶೇ.100ರಷ್ಟು ಕಡಿತಗೊಳಿಸುವುದು ಮತ್ತು ಬಡ್ಡಿ ಸಂಪೂರ್ಣ ಮನ್ನಾ ಮಾಡಲಾಗಿದೆ. ಈ ಯೋಜನೆ ಅನುಕೂಲ ಪಡೆಯುವುದಕ್ಕೆ ಜುಲೈ 31 ಕೊನೆಯ ದಿನವಾಗಿದೆ. ಆಸ್ತಿ ತೆರಿಗೆ ಒಳಪಡದೇ ಇರುವ ಆಸ್ತಿ ಮಾಲೀಕರು ವಿಶೇಷ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಿ ಬಡ್ಡಿ ಮತ್ತು ದಂಡ ಉಳಿತಾಯ ಮಾಡಬಹುದಾಗಿದೆ.

₹1500 ಕೋಟಿ ಆದಾಯ

ಬಿಬಿಎಂಪಿಯು ಇದೀಗ 20 ಲಕ್ಷ ಆಸ್ತಿಯಿಂದ ಸುಮಾರು ₹4 ಸಾವಿರ ಕೋಟಿ ಆಸ್ತಿ ತೆರಿಗೆಯನ್ನು ವಾರ್ಷಿಕವಾಗಿ ಸಂಗ್ರಹಿಸಲಾಗುತ್ತಿದೆ. ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೇ ಇರುವ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಂಡರೆ, ಬಿಬಿಎಂಪಿಗೆ ಹೆಚ್ಚುವರಿಯಾಗಿ ವಾರ್ಷಿಕ ₹1 ಸಾವಿರ ಕೋಟಿಯಿಂದ ₹1500 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ವಸೂಲಿ ಆಗಲಿದೆ ಎಂಬುದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಮಾರ್ಚ್‌ನಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳ್ಳದ ಆಸ್ತಿಗಳನ್ನು ಸೇರಿಸುವುದಕ್ಕೆ ವಿಶೇಷ ಆಯೋಜನೆ ಆರಂಭಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಶೀಘ್ರದಲ್ಲಿ ಜಾರಿಗೊಳಿಸಲಾಗುವುದು.

-ಮುನೀಶ್‌ ಮೌದ್ಗಿಲ್‌, ವಿಶೇಷ ಆಯುಕ್ತ, ಬಿಬಿಎಂಪಿ ಕಂದಾಯ.

Share this article