ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ₹2 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಜಿಲ್ಲೆಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ರಾಜ್ಯೋತ್ಸವದಂದು ನಗರದಲ್ಲಿ ಲಕ್ಷಾಂತರ ಜನ ಸೇರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ, ಕನ್ನಡ ಪರ ಹೋರಾಟಗಾರರು ಹಾಗೂ ಸಾಧಕರಿಗೆ ಸನ್ಮಾನಿಸಲು ಪ್ರತ್ಯೇಕ ಸಮಿತಿ ರಚನೆ ಹಾಗೂ ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಸಾರ್ವಜನಿಕರಿಗಾಗಿ ಗ್ಯಾಲರಿ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ ಮಾತನಾಡಿ, ರಾಜ್ಯೋತ್ಸವ ದಿನದಂದು ಕನ್ನಡಪರ ಸಂಘಟನೆಗಳಿಂದ ಹಾಕಲಾಗುವ ವೇದಿಕೆಗಳ ವಿವರಗಳನ್ನು ನೀಡಿದಲ್ಲಿ ಈ ಕುರಿತು ಪರಿಶೀಲಿಸಿ ವೇದಿಕೆ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲಾಗುವುದು. ಮೆರವಣಿಗೆ ಸಂದರ್ಭದಲ್ಲಿ ಅಸಭ್ಯ ವರ್ತನೆ ತೋರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಡಿ.ಜೆ ಸಂಸ್ಕೃತಿ ಬಿಟ್ಟು ಕನ್ನಡ ನಾಡಿನ ಸಂಸ್ಕತಿ ವಾದ್ಯಮೇಳಗಳನ್ನು ಬಳಸುವ ಮೂಲಕ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ಪಾರಂಪರಿಕ ಸಂಸ್ಕೃತಿಗೆ ನಾಂದಿ ಹಾಡಲು ತಿಳಿಸಿದರು.
ಕನ್ನಡ ಪರ ಹೋರಾಟಗಾರ ಮಹಾದೇವ ತಳವಾರ ಮಾತನಾಡಿ, ಗಾಂಧೀ ಭಾರತ ಕಾರ್ಯಕ್ರಮ ಪ್ರಯುಕ್ತ ನಗರದಲ್ಲಿ ಮಾಡಲಾದ ದೀಪಾಲಂಕಾರ ಹಾಗೂ ಚಿಹ್ನೆಗಳ ದೀಪಾಲಂಕಾರ ಮಾಡುವಂತೆ ಮನವಿ ಮಾಡಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಡರಾತ್ರಿ ವರೆಗೆ ಬಸ್ ವ್ಯವಸ್ಥೆ, ರೂಪಕ ವಾಹನ ಹಾಗೂ ಮೆರವಣಿಗೆ ಚಾಲನೆಗೆ ಸಮಯ ನಿಗದಿಪಡಿಸಲು ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.