ಸ್ವಾಮಿಮಲೈನಲ್ಲಿ ಗಣಿಗಾರಿಕೆ ತಡೆಗೆ ಜನಾಂದೋಲನಕ್ಕೆ ಸಿದ್ಧತೆ

KannadaprabhaNewsNetwork |  
Published : Jun 21, 2024, 01:07 AM ISTUpdated : Jun 21, 2024, 01:08 AM IST
ಸ | Kannada Prabha

ಸಾರಾಂಶ

ಸಂಡೂರು ಭಾಗದಲ್ಲಿ ಈಗಾಗಲೇ ಅಕ್ರಮ ಗಣಿಗಾರಿಕೆ ಮೂಲಕ ಪ್ರಕೃತಿ ಮೇಲೆ ಅತ್ಯಾಚಾರ ನಡೆಸಲಾಗಿದೆ.

ಸಂಡೂರು: ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ಒಂದಾದ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆ ನಡೆಸಲು ಸರ್ಕಾರ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಅನುಮತಿ ನೀಡಿರುವುದು ಪರಿಸರವಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆ ನಡೆಸದಂತೆ ತಡೆಯಲು ಕಾನೂನಾತ್ಮಕ ಹೋರಾಟದ ಜತೆಗೆ ಜನಾಂದೋಲನ ಮೂಲಕ ತಡೆಯಲು ಭರದ ಸಿದ್ಧತೆಗಳು ನಡೆದಿವೆ.

ಇದರ ಅಂಗವಾಗಿ ನಡೆದ ಗೂಗಲ್ ಮೀಟ್‌ನಲ್ಲಿ ಸಮಾಜ ಪರಿವರ್ತನಾ ಸಮುದಾಯ, ಜನಸಂಗ್ರಾಮ ಪರಿಷತ್, ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಸ್ಥಳೀಯರು ಸೇರಿದಂತೆ ಧಾರವಾಡ, ಹಾಸನ, ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ ಮುಂತಾದೆಡೆಯ ಪರಿಸರವಾದಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಲ್ಲದೆ, ಸಂಡೂರಿನ ಶ್ವಾಸಕೋಶದ ಒಂದು ಭಾಗದಂತಿರುವ ಮತ್ತು ಉತ್ತರ ಕರ್ನಾಟಕಕ್ಕೆ ಆಕ್ಸಿಜನ್ ಪೂರೈಸುವ ಬ್ಯಾಂಕ್‌ನಂತಿರುವ, ಜೀವ ವೈವಿಧ್ಯ, ಔಷಧೀಯ ಸಸ್ಯಗಳು, ಹಲವು ಹಳ್ಳ-ಕೊಳ್ಳ, ಜಲಪಾತ, ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ತಾಣಗಳನ್ನು ಹೊಂದಿರುವ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆ ತಡೆಗೆ ವಿವಿಧ ರೀತಿಯ ಹೋರಾಟ ನಡೆಸುವ ಕುರಿತು ಚರ್ಚಿಸಲಾಯಿತು.

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಮಾತನಾಡಿ, ಸಂಡೂರು ಭಾಗದಲ್ಲಿ ಈಗಾಗಲೇ ಅಕ್ರಮ ಗಣಿಗಾರಿಕೆ ಮೂಲಕ ಪ್ರಕೃತಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇದನ್ನು ತಿಳಿದೇ ಸುಪ್ರೀಂ ಕೋರ್ಟ್ ರಾಜ್ಯದಲ್ಲಿ ಗಣಿಗಾರಿಕೆಯನ್ನು ಈ ಹಿಂದೆ ಬಂದ್ ಮಾಡಿತ್ತು. ಈಗ ಪುನಃ ಜೀವವೈವಿಧ್ಯತೆಯಿಂದ ಕೂಡಿರುವ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ. ಇದನ್ನು ತಡೆಯಲು ಜನಶಕ್ತಿ ಮತ್ತು ನ್ಯಾಯಾಂಗ ಹೋರಾಟದ ಅಗತ್ಯವಿದೆ. ಅವಶ್ಯಕತೆ ಇರುವಷ್ಟು ಮಾತ್ರ ಗಣಿಗಾರಿಕೆ ನಡೆಯಬೇಕಿದೆ. ಮುಂದಿನ ಜನಾಂಗದ ಹಿತಾಸಕ್ತಿ ನೋಡಬೇಕಿದೆ. ಪರಿಸರ ಪುನಶ್ಚೇತನ ಹಾಗೂ ಮಾನವಿಕ ವಿಕಾಸನ ಸಾಧಿಸಬೇಕಿದೆ ಎಂದರು.

ಶ್ವೇತಪತ್ರ ಹೊರಡಿಸಲಿ:

ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ.ಎಂ. ಶಿವಕುಮಾರ್ ಮಾತನಾಡಿ, ಸಂಡೂರಿನ ಪರಿಸರದ ಶ್ವಾಸಕೋಶದ ಒಂದು ಭಾಗ ಸ್ವಾಮಿಮಲೈ ಅರಣ್ಯವಾದರೆ, ಮತ್ತೊಂದು ರಾಮನಮಲೈ ಅರಣ್ಯ ಪ್ರದೇಶ. ಇಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಈ ಶ್ವಾಸಕೋಶಕ್ಕೆ ಕ್ಯಾನ್ಸರ್ ಹಿಡಿಯಲಿದೆ ಎಂದರು.

ಸದಸ್ಯ ಶ್ರೀಶೈಲ ಆಲ್ದಳ್ಳಿ ಮಾತನಾಡಿ, ಇಲ್ಲಿ ೩೮ ಗಣಿ ಕಂಪನಿಗಳು ಕಾರ್ಯಾಚರಿಸುತ್ತಿವೆ. ಒಂದೆಡೆ ಅರಣ್ಯ ಇಲಾಖೆಯಿಂದ ಪರಿಸರ ಪುನಶ್ಚೇತನಕ್ಕಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿದ್ದರೆ, ಮತ್ತೊಂದೆಡೆ ಜೀವ ವೈವಿಧ್ಯದಿಂದ ಕೂಡಿದ ಅರಣ್ಯ ನಾಶಕ್ಕೆ ಸರ್ಕಾರ ಮುಂದಾಗಿರುವುದು ವಿಪರ್ಯಾಸ. ಇಲ್ಲಿನ ಉಕ್ಕು ಉದ್ಯಮಕ್ಕೆ ಎಷ್ಟು ಅದಿರು ಬೇಕು? ಈಗ ಉತ್ಪಾದಿಸುತ್ತಿರುವುದು ಎಷ್ಟು? ಎಂಬ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಸರ್ಕಾರ ರಾಮನಮಲೈ ಅರಣ್ಯದಲ್ಲಿನ ಸಿ ಕೆಟಗರಿ ಗಣಿ ಪ್ರದೇಶದಲ್ಲಿ ಕೆಐಒಸಿಎಲ್ ಹಾಗೂ ಎಸ್‌ಎಐಎಲ್ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ನೀಡಲಿ ಎಂದರು.

ಅರೆಮಲೆನಾಡು:

ರೈತ ಮುಖಂಡ ನಾಗರಾಜ್ ಮಾತನಾಡಿ, ಸಂಡೂರು ತನ್ನ ಅರಣ್ಯ ಸಂಪತ್ತಿನಿಂದಾಗಿ ಅರೆ ಮಲೆನಾಡಿನಂತಿದೆ. ಇಲ್ಲಿನ ಅರಣ್ಯ ನಾಶದಿಂದ ಈ ವರ್ಷ ಉಷ್ಣಾಂಶ ೪೦-೪೫ ಡಿಗ್ರಿವರೆಗೆ ತಲುಪಿತ್ತು. ಪರಿಸರ ಸಮತೋಲನ ಕಾಪಾಡಲು ಇಲ್ಲಿನ ಅರಣ್ಯವನ್ನು ಸಂರಕ್ಷಿಸುವುದು ಅಗತ್ಯವಿದೆ ಎಂದರು.

ಪತ್ರ ಚಳವಳಿ:

ವೆಂಕಟೇಶ್ ಮೂರ್ತಿ, ಆಂಜನೇಯ ರೆಡ್ಡಿ ಪತ್ರ ಚಳವಳಿ ಕುರಿತು ಪ್ರಸ್ತಾಪಿಸಿದರು. ಮಂಜುನಾಥ್ ಅವರು ಕೆಎಂಇಆರ್‌ಸಿ ಸಂಸ್ಥೆಯ ಘಟಕವನ್ನು ಸಂಡೂರಿನಲ್ಲಿ ಆರಂಭಿಸುವ ಅಗತ್ಯತೆ ಕುರಿತು ಮಾತನಾಡಿದರು. ಅಂಚೆ ಕೊಟ್ರೇಶ್ ಗಣಿಗಾರಿಕೆಯಿಂದ ಇಲ್ಲಿನ ಜನಜೀವನ, ಆರೋಗ್ಯ, ಕೃಷಿಯ ಮೇಲಿನ ಪ್ರತಿಕೂಲ ಪರಿಣಾಮಗಳ ಕುರಿತು ವಿವರಿಸಿದರು.

ಪರಿಸರಾಸಕ್ತ ಸಮಾನ ಮನಸ್ಕರು ಮಂಗಳವಾರ ನಡೆಸಿದ ಚರ್ಚೆಯು ಸಂಡೂರು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆ ನಡೆಯದಂತೆ ತಡೆಯಲು ಮತ್ತು ಇಲ್ಲಿನ ಜೀವವೈವಿಧ್ಯ ಮತ್ತು ಸಸ್ಯಸಂಪತ್ತನ್ನು ಸಂರಕ್ಷಿಸಲು, ಮಾನವಿಕ ವಿಕಾಸ ಸಾಧಿಸಲು ಜನಶಕ್ತಿಯ ಸಂಘಟನೆ, ಹೋರಾಟದ ಜೊತೆಗೆ ನ್ಯಾಯಾಂಗ ಹೋರಾಟದ ಅಗತ್ಯತೆ ಸಾರಿದೆ. ಅಲ್ಲದೆ, ಅರಣ್ಯದಲ್ಲಿನ ಹೊಸ ಗಣಿಗಾರಿಕೆಗೆ ತಾರ್ಕಿಕ ಅಂತ್ಯ ಹಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಾಸ ಮೂಡಿಸಿದೆ.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ತಡೆಯುವ ಇಚ್ಛಾಶಕ್ತಿ ಯಾವ ಸರ್ಕಾರಕ್ಕೂ ಇಲ್ಲ. ರಾಜಕೀಯಕ್ಕೂ ಗಣಿಗಾರಿಕೆಗೂ ನೆಂಟಸ್ತಿಕೆ ಇದೆ. ಇದನ್ನು ಜನಶಕ್ತಿ ಮತ್ತು ನ್ಯಾಯಾಂಗದ ಹೋರಾಟದ ಮೂಲಕ ತಡೆಯಬಹುದು ಎನ್ನುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ