ಕನ್ನಡಪ್ರಭ ವಾರ್ತೆ ಹಾಸನ
ಈ ವರ್ಷದ ಹಾಸನಾಂಬ ಜಾತ್ರೋತ್ಸವದ ನೆನಪು ಮಾಸುವ ಮುನ್ನವೇ ಮುಂದಿನ ವರ್ಷದ ಜಾತ್ರೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ವ್ಯವಸ್ಥಿತವಾಗಿ ನಡೆಸಬೇಕೆನ್ನುವ ಉದ್ದೇಶದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸಭೆ ನಡೆಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವಿ ದರ್ಶನಕ್ಕೆ ಈ ಬಾರಿ ಹತ್ತು ದೇಶಗಳಿಂದ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು. ಮುಂದಿನ ವರ್ಷಗಳಲ್ಲಿ ವಿದೇಶಿಗರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿಸಲು ಈಗಿನಿಂದಲೇ ತಯಾರಿ ಅಗತ್ಯವಿದೆ ಎಂದು ತಿಳಿಸಿದರು.
ದೇವಾಲಯದ ಎಡಭಾಗದಲ್ಲಿರುವ ಹಳೆಯ ಮನೆಗಳನ್ನು ಮಾಲೀಕರಿಂದ ನೇರ ಖರೀದಿಗೆ ಒಪ್ಪಿಕೊಳ್ಳುವುದಾದರೆ ಜ.೧೫ ರೊಳಗೆ ಖರೀದಿಗೆ ಕ್ರಮ ವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಯಾದ ಎಸಿ ಮಾರುತಿ ಅವರಿಗೆ ಸೂಚಿಸಿದರು.ಈ ಬಾರಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದ ಜಾಗವನ್ನು ಸಹ ಖರೀದಿಗೆ ಕ್ರಮವಹಿಸುವಂತೆ ತಿಳಿಸಿದರು. ಅಗತ್ಯಬಿದ್ದರೆ ಭೂಸ್ವಾಧೀನಕ್ಕೆ ಕ್ರಮವಹಿಸಲು ನಿರ್ದೇಶನ ನೀಡಿದರು. ದೇವಾಲಯದ ದುರಸ್ತಿ, ದೇವಾಲಯಕ್ಕೆ ಬಣ್ಣ, ಬ್ಯಾರಿಕೇಡ್, ಪ್ರತಿಯೊಂದನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಮಿತಿ ರಚಿಸಲು ಆಡಳಿತಾಧಿಕಾರಿಗೆ ಸೂಚನೆ ನೀಡಿದರಲ್ಲದೆ, ಪಾಸ್ ರದ್ದು ಮಾಡಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದವರಿಗೆ ಪ್ರಶಂಸೆ ಪತ್ರ ನೀಡುವಂತೆ ಸೂಚಿಸಿದರು. ಇಸ್ಕಾನ್ ದೇವಾಲಯದವರು ದೊನ್ನೆ ಪ್ರಸಾದ ಹಾಗೂ ಲಡ್ಡು ಪ್ರಸಾದವನ್ನು ಉತ್ತಮ ಗುಣಮಟ್ಟದಲ್ಲಿ ಭಕ್ತಾಧಿಗಳಿಗೆ ನೀಡಿದ್ದಾರೆ. ಅವರ ಸೇವೆ ಬಹಳ ಅಚ್ಚುಕಟ್ಟು ಹಾಗೂ ಉತ್ತಮವಾಗಿತ್ತು ಎಂದು ಸ್ಮರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಅವರು ಮಾತನಾಡಿ, ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಾರೆ. ಜನ ಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ಬ್ಯಾರಿಕೇಡ್ ಅಗತ್ಯವಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕರಾದ ಸುಜಯ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಗಿರೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.