ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂಕ್ರಾಂತಿ ಹಬ್ಬಕ್ಕೆ ಇನ್ನೆರಡು ದಿನಗಳಿದ್ದು ಮಂಗಳವಾರ ಚಿಕ್ಕಬಳ್ಳಾಪುರ ನಗರದಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದರು. ಸಂಕ್ರಾಂತಿ ಎಂದರೆ ರೈತರಿಗೆ ಸುಗ್ಗಿ-ಹುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿತ್ತು. ಆದರೆ ಸತತ ಬರಗಾಲ ಹಿನ್ನೆಲೆ ಸಂಕ್ರಾಂತಿ ಸಂತಸ ಮಾಯವಾಗಿದೆ. ಮತ್ತೊಂದೆಡೆ ಅವರೇಕಾಯಿ ಬಿಟ್ಟರೆ, ಕಡಲೇಕಾಯಿ, ಗೆಣಸು, ಕಬ್ಬು, ಎಳ್ಳು,ಬೆಲ್ಲ ದುಬಾರಿಯಾಗಿದೆ. ಖರೀದಿ ಮಾಡಲಾಗದೇ ಜನ ಹಬ್ಬದ ಸಂದರ್ಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ.
ದಿನೇ ದಿನೇ ಅನ್ನದಾತರು ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾಚರಣೆ ಇಲ್ಲದಿದ್ದರೂ, ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಕೆ.ಜಿ ಕಡಲೇಕಾಯಿ 100 ರಿಂದ 120 ರು., ಎಳ್ಳು ಬೆಲ್ಲ ಕೆಜಿಗೆ 200 ರು., ಗೆಣಸು 40- 50 ರು., ಕಬ್ಬು ಜಳವೆಗೆ 60 ರಿಂದ 80 ರು., ಅವರೇಕಾಯಿ ಎರಡೂವರೆ ಕೆ.ಜಿಗೆ 100 ರು. ಇದ್ದು ಬೆಲೆಗಳು ಹಬ್ಬಕ್ಕಾಗಿ ಹೆಚ್ಚಿವೆ.ಕಾಕಡ ಕೆ.ಜಿಗೆ 600 ರಿಂದ 700 ರು. ಕನಕಾಂಬರ ಕೆ.ಜಿಗೆ 1,600 ರಿಂದ 2,000 ರು. ಇದ್ದರೆ ಸೇವಂತಿಗೆ, ಗುಲಾಬಿ, ಸೇವಂತಿಗೆ ಮೊದಲಾದ ಹೂವಿನ ಬೆಲೆಗಳು 150 ರಿಂದ 200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಟೊಮೇಟೊ ಬಿಟ್ಟು ಉಳಿದವು ಸಾಧಾರಣವಾಗಿವೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.ಬೆಲೆಗಳ ಹೆಚ್ಚಳದ ನಡುವೆಯೂ ಸಂಕ್ರಾಂತಿ ಹಬ್ಬಕ್ಕಾಗಿ ಎಷ್ಟಾದರೂ ಸರಿ, ಹಬ್ಬ ಮಾಡಲೇ ಬೇಕೆಂದು ನಾಗರಿಕರು ಕೊಂಡು ಹೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ನಗರೀಕರಣದ ಪ್ರಭಾವವಿರುವ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಂಭ್ರಮ ಕಳೆದುಕೊಳ್ಳುತ್ತಿದ್ದಂತೆ ಭಾಸವಾಗುತ್ತಿತ್ತು.ದುಬಾರಿ ಬೆಲೆ ಕೇಳಿ ದಂಗಾದ ಗ್ರಾಹಕರು:
ಸಂಕ್ರಾಂತಿ ಕೃಷಿಕರ, ಹೆಂಗಳೆಯರಿಗೆ ಸಂಭ್ರಮದ ಹಬ್ಬ. ರೈತಾಪಿ ವರ್ಗದ ಜನತೆಗೆ ಸುಗ್ಗಿಯ ಹಬ್ಬವಾದರೆ, ಹೆಂಗಳೆಯರು ಎಳ್ಳು, ಬೆಲ್ಲ ಹಂಚಿ ಸಂತೋಷ ಪಡುವ ಹಬ್ಬವೂ ಹೌದು. ಹೀಗಾಗಿ ಎಲ್ಲೆಡೆ ಸಂಭ್ರಮದ ವಾತಾವರಣ. ಮುಖ್ಯವಾಗಿ ಹಳ್ಳಿಗಳಲ್ಲಿ ರೈತನ ಕೃಷಿ ಸಂಗಾತಿ ರಾಸುಗಳನ್ನು ಸ್ವಚ್ಛಗೊಳಿಸಿ ಕೊಂಬಿಗೆ ಬಣ್ಣ ಹಚ್ಚುವುದು, ಕಿಚ್ಚು ಹಾಯಿಸುವ ದೃಶ್ಯ ಮಾಮೂಲಿ ಇರಲಿದೆ. ಅದೇ ರೀತಿ ಪಟ್ಟಣ ಪ್ರದೇಶದಲ್ಲಿ ಬಣ್ಣದ ರಂಗೋಲಿ ಬಿಟ್ಟು, ಎಳ್ಳುಬೆಲ್ಲ ಹಂಚಿಕೆ ಮಾಡುವ ಸಡಗರಕ್ಕೆ ಮಂಗಳವಾರದಿಂದಲೇ ಸಂಕ್ರಾಂತಿಯ ಆಚರಣೆಗೆ ಭರದ ಸಿದ್ಧತೆ ನಡೆದಿತ್ತು. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆ (ಸರ್ ಎಂ ವಿಶ್ವೇಶ್ವರಯ್ಯ ರಸ್ತೆ) ಭುವನೇಶ್ವರಿ ವೃತ್ತ, ಸೀತಾ ಲಕ್ಷ್ಮಿ ಸರ್ಕಲ್ (ಮಾರ್ಕೆಟ್ ವೃತ್ತ) ಎಂಜಿ ರಸ್ತೆಯ ಖಾಸಗಿ ಬಸ್ ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥಗಳು ಬಂದಿದ್ದರೂ ಸಹಾ ಬೆಲೆ ದುಬಾರಿ ಎಂದು ಖರೀದಿಗೆ ಜನ ಅಷ್ಟಾಗಿ ಬಂದಿರಲಿಲ್ಲ.
ರಾಸುಗಳ ಸಂಖ್ಯೆ ಇಳಿಮುಖ: