ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಹೋತ್ಸವದ ಅಂಗವಾಗಿ ಭಕ್ತ ಮಂಡಳಿಯ ಸಮುದಾಯ ಭವನದಲ್ಲಿ ನಿರ್ಮಿಸಲಾಗುತ್ತಿರುವ ವಿಶೇಷ ಮಂಟಪದ ಕಾಮಗಾರಿಗೆ ವೇದಬ್ರಹ್ಮ ಶ್ರೀ ಚಂದ್ರಶೇಖರ್ ಅವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಮೈಸೂರು ಅರಮನೆ ಶೈಲಿಯ ದರ್ಬಾರ್ ಮಂಟಪ ಅರಮನೆಯ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುವಂತೆ ರೂಪಿಸಲಾಗುತ್ತಿದೆ. ಮಂಡಳಿ ಅಧ್ಯಕ್ಷ ರವೀಂದ್ರನಾಥ್ ಮಾತನಾಡಿ, ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಗೆ ಹಲವು ದಶಕಗಳ ಇತಿಹಾಸವಿದೆ. ಕಳೆದ 84 ವರ್ಷಗಳಿಂದ ವಿವಿಧ ಕ್ಷೇತ್ರಗಳ ನೂರಾರು ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಲಾಗಿದ್ದು, ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆದಿದೆ ಎಂದರು.
ಪ್ರಸ್ತುತ ಶಾಲಾ ಮಕ್ಕಳಲ್ಲಿರುವ ಪ್ರತಿಭೆಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. 64 ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತ ಪೂಜಾ ಕೈಂಕರ್ಯವನ್ನು ನೆರವೇರಿಸುವುದರ ಜೊತೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗುವುದು ಎಂದು ತಿಳಿಸಿದರು.ಮಂಡಳಿ ಕಾರ್ಯದರ್ಶಿ ಎಸ್.ಬಿ.ಟಿ. ಬಾಬು ಮಾತನಾಡಿ, ಕ್ಷೇತ್ರದ ಶಾಸಕರು ಸಚಿವರಾಗಿರುವುದು ಸಂತಸದ ಸಂಗತಿಯಾಗಿದ್ದು, ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಹಲವು ವರ್ಷಗಳಿಂದ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ಪಕ್ಷಭೇದವಿಲ್ಲದೆ ತಾಲೂಕಿನ ಜನರು ಪ್ರಸನ್ನ ಗಣಪತಿ ಮಹೋತ್ಸವಕ್ಕೆ ಬೆಂಬಲ ನೀಡುತ್ತಿದ್ದಾರೆ. ವಿವಿಧ ಸಂಘಸಂಸ್ಥೆಗಳು ಕೂಡ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿವೆ ಎಂದರು. ಮಂಡಳಿಯ ಸದಸ್ಯ ವಿಭವ್ ಇಟಗಿ ಮಾತನಾಡಿ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಮೂಲಕ ಅವರ ಪ್ರತಿಭೆಯನ್ನು ಸಮಾಜದ ಮುಂದೆ ಪರಿಚಯಿಸುವುದು ಮಂಡಳಿಯ ಪ್ರಮುಖ ಉದ್ದೇಶವಾಗಿದೆ. ಈ ಬಾರಿಯ 68 ದಿನಗಳ ಮಹೋತ್ಸವವೂ ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ನಾಗಭೂಷಣ್, ಸದಸ್ಯರಾದ ವಿನೋದ್, ಸಿದ್ದೇಶ್, ಅಶೋಕ್, ಸ್ವಾಮಿ, ಚೇತು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.