ಐಪಿಎಲ್‌ ಮಾದರಿಯಲ್ಲಿ ಕಂಬಳ ಆಯೋಜನೆಗೆ ತಯಾರಿ

KannadaprabhaNewsNetwork |  
Published : Oct 12, 2025, 01:00 AM ISTUpdated : Oct 12, 2025, 10:47 AM IST
Bengaluru Kambala

ಸಾರಾಂಶ

ಕರ್ನಾಟಕ ಸರ್ಕಾರದಿಂದ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದಿರುವ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಇನ್ನು ಮುಂದೆ ಜಾಗತಿಕವಾಗಿ ಬ್ರ್ಯಾಂಡ್‌ ಆಗಿರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್ ಲೀಗ್‌) ಮಾದರಿಯ ಸ್ಪರ್ಶ ಸಿಗಲಿದೆ.

 ಮಂಗಳೂರು :  ಕರ್ನಾಟಕ ಸರ್ಕಾರದಿಂದ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದಿರುವ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಇನ್ನು ಮುಂದೆ ಜಾಗತಿಕವಾಗಿ ಬ್ರ್ಯಾಂಡ್‌ ಆಗಿರುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್ ಲೀಗ್‌) ಮಾದರಿಯ ಸ್ಪರ್ಶ ಸಿಗಲಿದೆ. ಐಪಿಎಲ್‌ನಂತೆ ಉದ್ಯಮ ಕಂಪನಿಗಳಿಂದ ಬಿಡ್‌ ಆಹ್ವಾನಿಸಿ, ಅದ್ಧೂರಿಯಾಗಿ ಕಂಬಳ ಆಯೋಜಿಸಲು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಕಂಬಳ ಅಸೋಸಿಯೇಷನ್‌ ಉದ್ದೇಶಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಂಬಳ ಅಸೋಸಿಯೇಷನ್‌ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಸಕ್ತ ಕರಾವಳಿಯಲ್ಲಿ ಸುಮಾರು 25 ಕಂಬಳ‍ಗಳು ನಡೆಯುತ್ತಿವೆ. ವರ್ಷಂಪ್ರತಿ ಇದಕ್ಕೆ ಹೊಸ ಕಂಬಳಗಳು ಸೇರ್ಪಡೆಯಾಗುತ್ತಲೇ ಇರುತ್ತವೆ. ಈ ಕಂಬಳಗಳ ಆಯೋಜನೆಗೆ ಸರ್ಕಾರದಿಂದ ಸಿಗುವ ಅನುದಾನ ಕೇವಲ ಅತ್ಯಲ್ಪ. ಕಳೆದ ಬಾರಿ 5 ಲಕ್ಷ ರು.ನೀಡಿದ್ದರೆ, ಈ ಬಾರಿ 2 ಲಕ್ಷ ರು.ಗೆ ಸೀಮಿತವಾಗಿದೆ. ಒಂದು ಕಂಬಳ ನಡೆಸಲು 25 ರಿಂದ 40 ಲಕ್ಷ ರು.ವರೆಗೆ ವೆಚ್ಚವಾಗುತ್ತದೆ. ಇಷ್ಟೊಂದು ವೆಚ್ಚವನ್ನು ಭರಿಸಲು ಹಳ್ಳಿಗಾಡಿನಲ್ಲಿರುವ ಕಂಬಳ ಆಯೋಜಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇದಕ್ಕೆ ಐಪಿಎಲ್‌ ಮಾದರಿಯಲ್ಲಿ ಬಿಡ್‌ ಪಡೆದುಕೊಂಡು, ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದವರು ತಿಳಿಸಿದರು.ಏನಿದು ಐಪಿಲ್‌ ಮಾದರಿ ಕಂಬಳ?:

ಈ ವರ್ಷದ ಮಟ್ಟಿಗೆ ಪ್ರತಿಯೊಂದು ಕಂಬಳವನ್ನು ಒಂದೊಂದು ಕಂಪನಿಗಳಿಗೆ ವಹಿಸುವುದು. ಮುಂದಿನ ವರ್ಷದಿಂದ ಐಪಿಎಲ್‌ ಬಿಡ್‌ ಮಾದರಿಯಲ್ಲಿ ಪ್ರತಿ ವರ್ಷ ಕಂಬಳ ಏರ್ಪಡಿಸುವುದು ಇದರ ಉದ್ದೇಶ. ಅಂದರೆ, ಐಪಿಎಲ್‌ ಮಾದರಿಯಲ್ಲಿ ನಡೆಯುವ ಲೀಗ್‌ ಮಾದರಿಯಲ್ಲಿಯೇ ಸ್ಪರ್ಧೆ ಏರ್ಪಡಿಸುವುದು. ಅಲ್ಲದೆ, ಐಪಿಎಲ್‌ ಮಾದರಿಯಲ್ಲಿ ಕಂಬಳಕ್ಕೆ ಕಂಪನಿಗಳ ಬಿಡ್‌ ಆಹ್ವಾನಿಸಿದರೂ, ಕಂಬಳ ಕ್ರೀಡೆಯನ್ನು ಸಂಪ್ರದಾಯದಂತೆಯೇ ನಡೆಸಿಕೊಂಡು ಹೋಗುವ ಮೂಲಕ ಕಂಬಳ ಕ್ರೀಡೆಗೆ ಶಾಶ್ವತ ಸ್ಥಾನಮಾನ ಕಲ್ಪಿಸುವ ಉದ್ದೇಶ ನಮ್ಮದು ಎಂದರು.

ಆರಂಭಿಕ ಹಂತದಲ್ಲಿ ಕರಾವಳಿಯ ಉದ್ಯಮ ಕಂಪನಿಗಳಿಗೆ ಕಂಬಳ ಪ್ರಾಯೋಜಕತ್ವ ವಹಿಸಲು ಆದ್ಯತೆ ನೀಡಲಾಗುವುದು. ಬಳಿಕ ಮುಂಬೈ, ಬೆಂಗಳೂರು, ದೆಹಲಿ ಮುಂತಾದ ಮೆಟ್ರೋ ಸಿಟಿಗಳ ಪ್ರಾಯೋಜಕತ್ವವನ್ನು ಆಹ್ವಾನಿಸಲಾಗುವುದು ಎಂದವರು ತಿಳಿಸಿದರು.ಕಂಬಳ ಎಂದರೆ ಕೇವಲ ಕೋಣಗಳು, ಅವುಗಳನ್ನು ಸಾಕುವವರ ಖರ್ಚು ವೆಚ್ಚ ಭರಿಸುವುದು ಮಾತ್ರವಲ್ಲ, ಕಂಬಳ ಕರೆ ಬಿಡಿಸುವವರು, ಕೋಣ ಓಡಿಸುವವರು, ತೀರ್ಪುಗಾರರಿಗೂ ಸವಲತ್ತು ನೀಡಬೇಕಾಗುತ್ತದೆ. ಈಗ ಕಂಬಳಕ್ಕೆ ಸರ್ಕಾರ ಮಾನ್ಯತೆ ನೀಡಿದರೂ ಎಲ್ಲ ವೆಚ್ಚವನ್ನೂ ಸರ್ಕಾರದಿಂದ ಭರಿಸಲು ಸಾಧ್ಯವಾಗದು. ಅದಕ್ಕಾಗಿ ಉದ್ಯಮ ಕಂಪನಿಗಳನ್ನು ನೆಚ್ಚಿಕೊಳ್ಳಲೇ ಬೇಕಾಗುತ್ತದೆ ಎಂದು ಅವರು ಹೇಳಿದರು.

ಈ ಮಧ್ಯೆ, ಕಂಬಳಕ್ಕೆ ವಾರ್ಷಿಕ 2 ಕೋಟಿ ರು. ಮೀಸಲಿಡಬೇಕು. ಇದರಿಂದ ಒಂದು ಕಂಬಳಕ್ಕೆ ತಲಾ 8 ಲಕ್ಷ ರು.ನಂತೆ ಒಟ್ಟು 25 ಕಂಬ‍ಳಗಳಿಗೆ ಅನುದಾನ ನೀಡಲು ಸಾಧ್ಯವಾಗಲಿದೆ. ಜೊತೆಗೆ, ಕಂಬಳ ಕಾರ್ಮಿಕರಿಗೆ ಇತರ ಕಾರ್ಮಿಕರಂತೆ ಇಲಾಖೆಯಿಂದ ಸವಲತ್ತು ನೀಡಬೇಕು ಎಂದು ಕೋರಿ ಸಚಿವ ಸಂತೋಷ್‌ ಲಾಡ್‌ಗೆ ಪುತ್ತೂರು ಶಾಸಕ ಅಶೋಕ್‌ ರೈ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಲ್ಲಿ ಮನವಿ ಕೂಡ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಕೋಟ್‌:ಅ.15ರಂದು ತೀರ್ಮಾನ

ಐಪಿಎಲ್‌ ಮಾದರಿಯಲ್ಲಿ ಕಂಬಳಕ್ಕೆ ಕಂಪನಿಗಳ ಬಿಡ್‌ ಆಹ್ವಾನಿಸಿದರೂ ಕಂಬಳ ಕ್ರೀಡೆ ಸಂಪ್ರದಾಯದಂತೆಯೇ ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಅ.15ರಂದು ಮೂಡುಬಿದಿರೆಯಲ್ಲಿ ಅಸೋಸಿಯೇಷನ್‌ನ ಪ್ರಥಮ ಸಭೆ ನಡೆಯಲಿದ್ದು, ಅದರಲ್ಲಿ ಈ ಬಗೆಗಿನ ರೂಪು-ರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

- ಡಾ.ಐಕಳಬಾವ ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ರಾಜ್ಯ ಕಂಬಳ ಅಸೋಸಿಯೇಷನ್‌.

PREV
Read more Articles on

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ