ಕನ್ನಡಪ್ರಭ ವಾರ್ತೆ ಮಂಡ್ಯ
ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಕೆಲವೊಂದಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದು, ನನ್ನ ಕಾಲದ ಅಭಿವೃದ್ಧಿಗೆ ಸಂಬಂಧಿಸಿದ ಶಂಕುಸ್ಥಾಪನೆ ಕಲ್ಲುಗಳನ್ನು ಕಿತ್ತೆಸೆಯಲಾಗಿದೆ. ಆಶ್ರಯ ಬಡಾವಣೆಗೆ ಸರ್ಕಾರವೇ ಡಾ.ಕೆ.ಅನ್ನದಾನಿ ಬಡಾವಣೆ ಎಂದು ನಾಮಕರಣ ಮಾಡಿ ಫಲಕ ಅಳವಡಿಸಿದ್ದರೂ ಒಡೆದುಹಾಕಿದ್ದಾರೆ.
ಆರು ತಿಂಗಳಿಂದ ಇಂತಹ ಕೆಲಸಗಳು ತಾಲೂಕಿನಲ್ಲಿ ನಡೆಯುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗೋಸ್ಕರ ಸರಬರಾಜಾಗಬೇಕಿದ್ದ ಗೋಧಿಯು ಕಾಂಗ್ರೆಸ್ ಮುಖಂಡ ಪ್ರಭುಲಿಂಗು ಮನೆಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಎಫ್‌ಐಆರ್ ಕೂಡ ಆಗಿದೆ. ಆದರೆ, ಗೋಧಿ ಪತ್ತೆಯಾದ ಕಾಂಗ್ರೆಸ್ ಮುಖಂಡನನ್ನು ಬಂಧಿಸದೆ ವಸತಿ ಶಾಲೆಯ ಅಮಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದರು.
ಬಿಗ್‌ಬಾಸ್ ರಿಯಾಲಿಟಿ ಷೋನಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂಬ ಕಾರಣ ನೀಡಿ ದಿಢೀರ್ ಸ್ಥಗಿತಗೊಳಿಸಿದ್ದಾರೆ. ಆ ಕಾರ್ಯಕ್ರಮವನ್ನು ನಂಬಿಕೊಂಡು ೭೦೦ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವುದು ಮನರಂಜನೆ ಕಾರ್ಯಕ್ರಮವೇ ಹೊರತು ಯಾವ ಕಾರ್ಖಾನೆಯನ್ನೂ ಸಹ ನಡೆಸುತ್ತಿಲ್ಲ. ಅಲ್ಲಿ ಯಾವ ಹೊಗೆಯೂ ಬರುತ್ತಿಲ್ಲ. ಮನರಂಜನೆ ಕಾರ್ಯಕ್ರಮದಲ್ಲಿ ಪರಿಸರ ಮಾಲಿನ್ಯ ಹೇಗೆ ಉಂಟಾಗುತ್ತದೆ. ಬಿಗ್‌ಬಾಸ್ ಷೋನವರಿಂದ ಹಣ ಬರಲಿಲ್ಲವೆಂಬ ಕಾರಣಕ್ಕೆ ದಿಢೀರ್ ಬಂದ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಕಾಂತರಾಜು, ಸಿದ್ದಾಚಾರಿ, ಸಾತನೂರು ಜಯರಾಂ ಹಾಜರಿದ್ದರು.