ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಗಮ ಸಭಾಭವನದಲ್ಲಿ ಶನಿವಾರ ಯುಕೆಪಿ ಯೋಜನೆಯಡಿ ಮುಳುಗಡೆ ಜಮೀನಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅವಾರ್ಡ್ ಆಗಿರುವ ಹಾಗೂ ಅವಾರ್ಡ್ ಸ್ಟೇಜ್‌ನಲ್ಲಿರುವ ಜಮೀನುಗಳ ಸರ್ವೆ ಕಾರ್ಯ ಕೈಗೊಂಡು ಪರಿಹಾರ ಹಂಚಿಕೆ ಮಾಡಲು ಎಲ್ಲ ರೀತಿಯ ಮಾಹಿತಿ ಇಟ್ಟುಕೊಂಡು ಸಜ್ಜಾಗಿರಬೇಕು. ಇದಕ್ಕಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಲು ಸೂಚನೆ ನೀಡಿದರು.
ಆದ್ಯತೆ ಮೇರೆಗೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು ಮಾನವೀತ ದೃಷ್ಟಿ ಇಟ್ಟುಕೊಂಡು ಹಾಗೂ ನೋಂದ ಸಂತ್ರಸ್ತರಿಗೆ ಧ್ವನಿಯಾಗಲು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೂಕ್ತ ಪರಿಹಾರ ದೊರೆಯುವಂತೆ ಮಾಡಬೇಕು. ಮುಧೋಳ ತಾಲೂಕು ವ್ಯಾಪ್ತಿಯಲ್ಲಿ 3300 ಎಕರೆ, ಬೀಳಗಿ ತಾಲೂಕಿನಲ್ಲಿ 19500 ಎಕರೆ ಜಮಖಂಡಿ ತಾಲೂಕಿನಲ್ಲಿ 2400 ಎಕರೆ ಹಾಗೂ ಬಾಗಲಕೋಟೆಯಲ್ಲಿ 8700 ಎಕೆರೆ ಜಮೀನು ಮುಳುಗಡೆಯಾಗುತ್ತಿರುವ ಬಗ್ಗೆ ಕೆಬಿಜೆಎನ್ಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಪುನರ್ವಸತಿ ಕೇಂದ್ರಗಳಲ್ಲಿ ಶೇ.50ಕ್ಕಿಂತ ಅಧಿಕ ಜನರು ಶಿಫ್ಟ್ ಆಗುತ್ತಿದ್ದರೆ, ಆ ಕೇಂದ್ರದಲ್ಲಿ ಸಮಸ್ಯೆಗಳು ಇದ್ದಲ್ಲಿ ಪರಿಹರಿಸುವ ಕೆಲಸವಾಗಬೇಕು. ಪ್ರತಿಯೊಂದು ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ ಜಾಗ ಗುರುತಿಸಿ ಅದಕ್ಕೆ ಬೋರ್ಡ್ ಹಾಕುವ ಕೆಲಸವಾಗಬೇಕು. ಜಮಖಂಡಿ ಎಸ್.ಎಲ್.ಓಗಳು ಮುಂದಿನ 5 ದಿನಗಳಲ್ಲಿ ಗ್ರಾಮಸಭೆ ಕೈಗೊಂಡು ಸಂತ್ರಸ್ತರ ಅಹವಾಲುಗಳಿಗೆ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಮೊದಲ ಹಂತದಲ್ಲಿ 23 ಗ್ರಾಮಗಳ ಸಂತ್ರಸ್ತರ ಪಟ್ಟಿಯನ್ನು ಸಿದ್ದಪಡಿಸಲು ತಿಳಿಸಿದರು.
ಸಭೆಯಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಯುಕೆಪಿ ವ್ಯವಸ್ಥಾಪಕ ನಿರ್ದೇಶಕ ಗಜಾನನ ಬಾಲೆ, ಪುನರ್ವಸತಿ ಅಧಿಕಾರಿ ಮಹಾದೇವ ಮುರಗಿ ಸೇರಿದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ಹಾಗೂ ಎಸ್.ಎಲ್.ಓಗಳು ಉಪಸ್ಥಿತರಿದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಮುಳುಗಡೆಯಾಗುವ ವಿವಿಧ ಗ್ರಾಮಗಳ ರೈತರ ಅಹವಾಲುಗಳನ್ನು ಆಲಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಮಾಡಲಾಗುವುದೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು. ಐತೀರ್ಪು ಹೊರಡಿಸಿದರೆ, ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆಯಲಾಗುವುದೆಂದು ಸಂತ್ರಸ್ತರು ತಿಳಿಸಿದರು. ಜುನ್ನೂರು, ಕಸಬಾಜಂಬಗಿ, ಟಕ್ಕಳಕಿ, ಯತ್ನಟ್ಟಿ, ಕಾತರಕಿ, ಮುದ್ದಾಪೂರ, ಮುಂಡಗನೂರ, ಗಲಗಲಿ, ಕೋವಳ್ಳಿ, ಬುದುಹಾಳ, ಹಿರೇಸಂಶಿ, ಚೌಡಾಪೂರ ಸೇರಿ ಇತರೆ ಗ್ರಾಮದ ಮುಳುಗಡೆ ಸಂತ್ರಸ್ತರ ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು.