ಪ್ರವಾಸಿ ತಾಣಗಳನ್ನು ಉಳಿಸಿ, ಬೆಳೆಸುವುದು ಆದ್ಯ ಕರ್ತವ್ಯ: ಜಿಲ್ಲಾಧಿಕಾರಿ ಪೂವಿತಾ

KannadaprabhaNewsNetwork |  
Published : Sep 30, 2026, 01:30 AM IST
29ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಜಿಲ್ಲೆಯ ಪ್ರವಾಸಿ ತಾಣಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರವಾಸೋದ್ಯಮವು ಒಂದು ಕಡೆಯಿಂದ ದೇಶದ ಆರ್ಥಿಕತೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರೆ, ಮತ್ತೊಂದು ಕಡೆಯಿಂದ ನಮ್ಮ ಇತಿಹಾಸ ಮತ್ತು ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುತ್ತದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ಪ್ರವಾಸಿ ತಾಣಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರವಾಸೋದ್ಯಮವು ಒಂದು ಕಡೆಯಿಂದ ದೇಶದ ಆರ್ಥಿಕತೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರೆ, ಮತ್ತೊಂದು ಕಡೆಯಿಂದ ನಮ್ಮ ಇತಿಹಾಸ ಮತ್ತು ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುತ್ತದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದಲ್ಲಿನ ಮೆಕ್ಕಾ ದರ್ವಾಜ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪುರಾತತ್ತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ - 2026ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದ ಅವರು. ಪ್ರವಾಸಿ ತಾಣಗಳ ಪರಿಸರ ವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪ್ರವಾಸಿಗರ ಸುರಕ್ಷತೆ–ಭದ್ರತೆಗೆ ಆದ್ಯತೆ ನೀಡುವುದು, ಪ್ರಾಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ಅಲ್ಲದೆ ಕರ್ನಾಟಕವು ಪ್ರವಾಸೋದ್ಯಮ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ರಾಜ್ಯವಾಗಿದೆ ಎಂದರು.

ನಮ್ಮ ಜಿಲ್ಲೆಯು ಐತಿಹಾಸಿಕವಾಗಿಯೂ ಮತ್ತು ಎರಡು ನದಿಗಳ ಮಧ್ಯದಲ್ಲಿರುವ ಸುಂದರವಾದ ಜಿಲ್ಲೆಯಾಗಿದೆ. ಮಸ್ಕಿಯಲ್ಲಿ ಅಶೋಕ ಕಾಲದ ಐತಿಹಾಸಿಕ ತಾಣಗಳು ಸೇರಿದಂತೆ ಪ್ರವಾಸಿಗರು ಮೆಚ್ಚುವಂತಹ ಅನೇಕ ತಾಣಗಳು ನಮ್ಮ ಜಿಲ್ಲೆಯ ಒಳಗಿವೆ. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 38 ಪ್ರವಾಸಿ ತಾಣಗಳನ್ನು ಪ್ರಸಿದ್ಧಿ ಮಾಡುವ ಸಲುವಾಗಿ ಬೋರ್ಡ್‌ಗಳನ್ನು ಹಾಕಲಾಗುತ್ತಿದ್ದು, ಪ್ರತಿ ತಿಂಗಳು ಸರ್ಕಾರಿ ನೌಕರರ ಸಂಘ ಮತ್ತು ಟೂರಿಸಂ ಇಲಾಖೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ಪ್ರದರ್ಶಿಸಲಾಗುತ್ತದೆ ಎಂದರು.

ಈಕೋ ಟೂರಿಸಂ ಅನ್ನು ಪ್ರಮೋಟ್ ಮಾಡುವುದರ ಮೂಲಕ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಂಜಾಯ್ ಮಾಡಬಹುದು. ಜೊತೆಗೆ ಸ್ಥಳೀಯವಾಗಿ ಯುವಕರಿಗೆ ಉದ್ಯೋಗಾವಕಾಶಗಳು ಮತ್ತು ಹೊಸ ತಾಣಗಳನ್ನು ಅನ್ವೇಷಿಸಲು ಇದು ಸಹಕಾರಿಯಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವಾಗ ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಜಾಗರೂಕತೆಯಿಂದ ಹಿಂತಿರುಗಿ ತಂದು ವಿಲೇವಾರಿ ಮಾಡುವ ಮೂಲಕ ಜೀರೋ ವೇಸ್ಟ್ ಟ್ರಕ್ಕಿಂಗ್ ಅನ್ನು ಉತ್ತೇಜಿಸಲಾಗುತ್ತಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಕನವಳ್ಳಿ ಮತನಾಡಿ, ನಗರದಲ್ಲೇ ಇರುವ ಪಾಂಚೆ ಬಿಬಿ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಇದಕ್ಕಾಗಿ 100 ವಿದ್ಯಾರ್ಥಿಗಳಿಗೆ ಟ್ರೆಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇದರ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು. ಅಲ್ಲದೆ 38 ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾ ಕೇಂದ್ರದ ವಿವಿಧ ಪ್ರಮುಖ ಸ್ಥಳಗಳಾದ ಡಿಸಿ ಆಫೀಸ್, ಬಸ್ ನಿಲ್ದಾಣ, ಕೋರ್ಟ್, ಜಿಲ್ಲಾ ಪಂಚಾಯಿತಿ ಸೇರಿದಂತೆ ಇತ್ಯಾದಿ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದನ್ನು ಸ್ಕ್ಯಾನ್ ಮಾಡಿದರೆ ಹೈಪರ್ ಲಿಂಕ್ ಮೂಲಕ 38 ಪ್ರವಾಸಿ ತಾಣಗಳ ವಿವರಗಳು ಸಿಗಲಿವೆ ಎಂದರು.

ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಸ್ಟಮೈಸ್ಡ್ ಐಟಿನರಿ ಪ್ರಯಾಣದ ಯೋಜನೆಯನ್ನು ಸಿದ್ಧಪಡಿಸಿಕೊಡಲಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ತಮ್ಮ ಜೀವನದ ಪರಿವರ್ತನಾ ಹಂತದಲ್ಲಿದ್ದು, ಎಐ ಹಾಗೂ ಚಾಟ್ ಜಿಪಿಟಿ ನಂತಹ ಆಧುನಿಕ ತಂತ್ರಜ್ಞಾನಗಳನ್ನು ಜ್ಞಾನಾರ್ಜನೆಗಾಗಿ ಧನಾತ್ಮಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಕೆಎಸ್‌ಟಿಡಿಸಿ ವತಿಯಿಂದ ತರಬೇತಿ ಪಡೆದ ಎರಡನೆ ಹಂತದ 20 ಪ್ರವಾಸಿ ಮಿತ್ರರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ನಂತರ ನಗರದ ಪಾಂಚೆ ಬಿಬಿ ಟ್ರೆಕ್ಕಿಂಗ್ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ