21ಕ್ಕೆ ಪತ್ರಿಕಾ ದಿನಾಚರಣೆ, ವಿವಿಧ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Aug 3, 2024 12:37 AM

ಸಾರಾಂಶ

ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ಬೆಂಗಳೂರು, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಹಾಗೂ ವಿಜಯಪುರ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸಮಾರಂಭವು ಪಟ್ಟಣದ ಹುಡ್ಕೋ ಬಡಾವಣೆ ಹತ್ತಿರವಿರುವ ಟಾಪ್ ಇನ್ ಟೌನ್ ಮಂಗಲ ಭವನದಲ್ಲಿ ಆ.೨೧ ರಂದು ಜರುಗಲಿದೆ ಎಂದು ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ಬೆಂಗಳೂರು, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕು ಹಾಗೂ ವಿಜಯಪುರ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸಮಾರಂಭವು ಪಟ್ಟಣದ ಹುಡ್ಕೋ ಬಡಾವಣೆ ಹತ್ತಿರವಿರುವ ಟಾಪ್ ಇನ್ ಟೌನ್ ಮಂಗಲ ಭವನದಲ್ಲಿ ಆ.೨೧ ರಂದು ಜರುಗಲಿದೆ ಎಂದು ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಾಧ್ಯಮ ಒಕ್ಕೂಟ(ರಿ)ಬೆಂಗಳೂರು, ವಿಜಯಪುರ ಜಿಲ್ಲಾ ಘಟಕ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಘಟಕದ ವತಿಯಿಂದ ಕೊಡಮಾಡುವ ರಾಜ್ಯಮಟ್ಟ ಮಾಧ್ಯಮ ರತ್ನ ಪ್ರಶಸ್ತಿಗೆ ಕನ್ನಡಪ್ರಭದ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಜಗದೀಶ ವಿರಕ್ತಮಠ, ನ್ಯೂಸ್ ೧೮ ಟಿವಿ ನಿರೂಪಕಿ ನವೀತಾ ಜೈನ, ಬಿ ಟಿವಿ ಕ್ರೈಂ ಬ್ಯುರೋ ಮುಖ್ಯವರದಿಗಾರ ಬಸವರಾಜ ಕುಂಬಾರ, ಬಾಗಲಕೋಟೆ ಉದಯವಾಣಿ ಜಿಲ್ಲಾ ವರದಿಗಾರ ಶ್ರೀಶೈಲ ಬಿರಾದಾರ ಸೇರಿದಂತೆ ತಾಳಿಕೋಟೆ ಸಂಯುಕ್ತ ಕರ್ನಾಟಕ ತಾಲೂಕು ವರದಿಗಾರ ಅಂಬಾಜಿ ಘೋರ್ಪಡೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ ಮಾಜಿ ಸಚಿವ ಮುರಗೇಶ ನಿರಾಣಿಯವರ ಮಾಧ್ಯಮ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ ದಿ.ಡಾ.ನಾಗರಾಜ ಬ.ಜಮಖಂಡಿ ಸ್ಮರಣಾರ್ಥ ಪ್ರತಿ ಕೊಡಮಾಡಲಾಗುವ ಮಾಧ್ಯಮ ಸಾಧಕ ಮತ್ತು ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿಗೆ ೧೦ ಜನ ಸಾಧಕ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದರು.ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ(ರಿ) ಮುದ್ದೇಬಿಹಾಳ ಹಾಗೂ ಡಾ.ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್(ರಿ) ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನೀಡುವ ಮಾಧ್ಯಮ ಸಾಧಕ ಪ್ರಶಸ್ತಿಯನ್ನು ೨೦೨೪ನೇ ಸಾಲಿಗೆ ವಿಜಯಪುರ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿಯ ಸಾಧಕರೊಬ್ಬರಿಗೆ ನೀಡುವ ಮಾಧ್ಯಮ ಸಾಧಕ ಪ್ರಶಸ್ತಿಯನ್ನು ವಿಶ್ವವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರ ಬಸವರಾಜ ಶಂಕ್ರಪ್ಪ ಉಳ್ಳಾಗಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ಬೆಂಗಳೂರು ವತಿಯಿಂದ ಕೊಡಮಾಡುವ ಜೀವಮಾನ ಮಾಧ್ಯಮ ಸಾಧಕ ಪ್ರಶಸ್ತಿಗೆ ವಿಜಯಪುರದ ಸಂಯುಕ್ತ ಕರ್ನಾಟಕದ ಹಿರಿಯ ವರದಿಗಾರ, ಅಂಕಣಕಾರ ಗೋಪಾಲ ನಾಯಕ, ಬೆಂಗಳೂರಿನ ವಾರ್ತಾಜಾಲ ದಿನಪತ್ರಿಕೆಯ ಸಂಪಾದಕ ಬಿ.ಕೆ.ಪ್ರಸನ್ನ ಹಾಗೂ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿಗೆ ಸಚಿನ ಚಲವಾದಿ ಮತ್ತು ವಿನ್ಯಾಸ ಭೂಷಣ ಪ್ರಶಸ್ತಿಗೆ ವಿಜಯಪುರ-ಬಾಗಲಕೋಟೆ ಆವೃತ್ತಿಯ ವಿಜಯವಾಣಿ ಪುಟ ವಿನ್ಯಾಸಗಾರ ದತ್ತಾತ್ರೇಯ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ಬೆಂಗಳೂರು ಗೌರವಾಧ್ಯಕ್ಷ ಜಿ.ಟಿ.ಘೋರ್ಪಡೆ, ತಾಲೂಕು ಅಧ್ಯಕ್ಷ ಪರಶುರಾಮ ಕೊಣ್ಣೂರ, ಶಿವಕುಮಾರ ಶಾರದಳ್ಳಿ, ಶ್ರೀಶೈಲ ಪೂಜಾರಿ, ಬಸವರಾಜ ಯಂಕಂಚಿ, ರವಿ ಕುಂಬಾರ, ಚಂದ್ರು ಮೂಕಿಹಾಳ ಮೊದಲಾದವರು ಇದ್ದರು.

ಕನ್ನಡಪ್ರಭದ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಜಗದೀಶ ವಿರಕ್ತಮಠ, ನ್ಯೂಸ್ ೧೮ ಟಿವಿ ನಿರೂಪಕಿ ನವೀತಾ ಜೈನಗೆ ರಾಜ್ಯಮಟ್ಟ ಮಾಧ್ಯಮ ರತ್ನ ಪ್ರಶಸ್ತಿ, ಅಂಕಣಕಾರ, ಪತ್ರಕರ್ತ ಗೋಪಾಲ ನಾಯಕ, ವಾರ್ತಾಜಾಲ ಪತ್ರಿಕೆಯ ಸಂಪಾದಕ ಬಿ.ಕೆ.ಪ್ರಸನ್ನಗೆ ಜೀವಮಾನ ಮಾಧ್ಯಮ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

-ನಾರಾಯಣ ಮಾಯಾಚಾರಿ,

ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ರಾಜ್ಯಾಧ್ಯಕ್ಷರು.

Share this article