ಜಿಲ್ಲೆಯ ಎಲ್ಲಾ ತಾಲೂಕಿನ ಮುಖಂಡರು, ಕಾರ್ಯಕರ್ತರ ಸಭೆ । ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ
ಕನ್ನಡಪ್ರಭ ವಾರ್ತೆ ಮಂಡ್ಯಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಥವಾ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದೆ. ಮಂಡ್ಯ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ಎಚ್‌ಡಿಕೆ ಅವರು ಸ್ಥಳೀಯ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯ ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೆ ನಾನು ಮತ್ತು ನನ್ನ ಮಗ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿಕೊಂಡೇ ಮಂಡ್ಯ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಂದ ತಮ್ಮ ಮೇಲೆ ಒತ್ತಡ ಬೀರುವಂತೆ ಮಾಡಿ ಮಂಡ್ಯ ಅಖಾಡ ಪ್ರವೇಶಿಸುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ವತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.ಇದಕ್ಕೆ ಪೂರಕವಾಗಿ ಬೆಂಗಳೂರಿನ ಜೆ.ಪಿ.ಭವನದಲ್ಲಿ ಗುರುವಾರ ಜಿಲ್ಲೆಯ ಮಾಜಿ ಶಾಸಕರು ಹಾಗೂ ಎಲ್ಲಾ ತಾಲೂಕುಗಳ ಮುಖಂಡರು, ಕಾರ್ಯಕರ್ತರ ಜೊತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠಗೊಳ್ಳಬೇಕಾದರೆ ಎಚ್.ಡಿ.ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಕುಮಾರಸ್ವಾಮಿ ಅವರು ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ ಕನಿಷ್ಠ ಮೂರ್ನಾಲ್ಕು ಸ್ಥಾನಗಳಲ್ಲಿ ಪಕ್ಷ ಗೆಲುವನ್ನು ಸಾಧಿಸುತ್ತಿತ್ತು. ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಮಂಡ್ಯದಲ್ಲಿ ಪ್ರಾಬಲ್ಯ ಕಳೆದುಕೊಳ್ಳುವಂತಾಯಿತು ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುವುದರಿಂದ ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಇನ್ನಷ್ಟು ಬಲಿಷ್ಠಗೊಳ್ಳುವುದಕ್ಕೆ ಸಾಧ್ಯವಾಗಲಿದೆ. ರೈತರ ಸಾಲ ಮನ್ನಾ ಯೋಜನೆಯಿಂದ ಜನಪ್ರಿಯರಾಗಿರುವುದರಿಂದ ಹೆಚ್ಚು ಮತಗಳು ಪಕ್ಷಕ್ಕೆ ಹರಿದುಬರಲಿವೆ. ಅವರನ್ನು ಹೊರತುಪಡಿಸಿ ಬೇರೆ ಯಾರೇ ಅಭ್ಯರ್ಥಿಯಾದರೂ ಪಕ್ಷ ಸುಭದ್ರವಾಗುವುದು ಕಷ್ಟವಾಗಲಿದೆ ಎಂದು ಮತ್ತೆ ಕೆಲವರು ಅಭಿಪ್ರಾಯ ಮಂಡಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಅಂದಿನ ಸೋಲಿಗೆ ನಾನಾ ರೀತಿಯ ಕಾರಣಗಳಿದ್ದವು. ಆದರೆ, ಈಗ ಜಿಲ್ಲೆಯೊಳಗೆ ರಾಜಕೀಯ ಪರಿಸ್ಥಿತಿಗಳು ಬದಲಾಗಿವೆ. ಆದ ಕಾರಣ ನಿಖಿಲ್ ಅವರನ್ನು ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಲಿದೆ. ಎಲ್ಲರೂ ಅವರ ಗೆಲುವಿಗೆ ಕೈಜೋಡಿಸೋಣ. ಇದರ ಜೊತೆಗೆ ಬಿಜೆಪಿ ಬಲವೂ ಸೇರುವುದರಿಂದ ನಿಖಿಲ್ ಗೆಲುವಿಗೆ ಅನುಕೂಲವಾಗಲಿದೆ ಎಂಬ ಅನಿಸಿಕೆಗಳು ಸಭೆಯಲ್ಲಿ ವ್ಯಕ್ತವಾದವು.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದರೆ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ತರಬಹುದು. ಇದರಿಂದ ಅವರ ವರ್ಚಸ್ಸು, ಕೇಂದ್ರದಲ್ಲಿ ನಾಯಕತ್ವ ಬೆಳವಣಿಗೆಯಾಗಲಿದೆ. ಇದು ಮುಂದೆ ಪಕ್ಷಕ್ಕೂ ಹೆಚ್ಚಿನ ನೆರವಾಗಲಿದೆ. ರಾಜ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವುದು ಒಳ್ಳೆಯದು ಎಂದು ಹಲವರು ಸಲಹೆ ನೀಡಿದರೆ, ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಿದರೆ ರಾಜ್ಯದೊಳಗೆ ಜೆಡಿಎಸ್ ಪ್ರಾಬಲ್ಯ ಕುಗ್ಗಲಿದೆ. ಜೆಡಿಎಸ್ ಮುನ್ನಡೆಸುವವರು ಯಾರೂ ಇರುವುದಿಲ್ಲ. ಅವರು ರಾಜ್ಯ ರಾಜಕಾರಣದಲ್ಲಿದ್ದರೆ ಉತ್ತಮ. ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಕೇಂದ್ರಕ್ಕೆ ಕಳುಹಿಸೋಣ ಎಂದು ಇನ್ನೂ ಕೆಲವರು ಹೇಳಿದರು.
ಇದರೊಂದಿಗೆ ಮಂಡ್ಯ ಲೋಕಸಭೆಯ ಹಲವು ಕ್ಷೇತ್ರದ ಮಾಜಿ ಶಾಸಕರು ಕೂಡ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲರ ಸಲಹೆ, ಅನಿಸಿಕೆ, ಅಭಿಪ್ರಾಯಗಳನ್ನು ನಿಖಿಲ್ ಕುಮಾರಸ್ವಾಮಿ ಕ್ರೋಢೀಕರಿಸಿ ವರಿಷ್ಠರ ಮುಂದಿಡುವುದಾಗಿ ತಿಳಿಸಿದರು.ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷ ರಘುನಂದನ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.
--------------ಕೋಟ್....
ಲೋಕಸಭೆಗೆ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸೋಣ. ಅವರು-ಇವರು ಎಂದು ಕಾಲೆಳೆಯುವುದು ಬೇಡ. ವರಿಷ್ಠರ ಸಮ್ಮುಖದಲ್ಲಿ ಸಭೆ ಕರೆದು ಅವರು ಯಾರನ್ನು ಅಭ್ಯರ್ಥಿ ಮಾಡುವರೋ ಅವರ ಪರವಾಗಿ ನಿಲ್ಲೋಣ. ಮತ್ತೆ ಪಕ್ಷಕ್ಕೆ ಮಂಡ್ಯ ಜಿಲ್ಲೆಯೊಳಗೆ ಸುಭದ್ರ ನೆಲೆ ದೊರಕಿಸಬೇಕಿದೆ.- ಡಿ.ಸಿ.ತಮ್ಮಣ್ಣ, ಮಾಜಿ ಸಚಿವ
-------------------------ಕೋಟ್,,,,
ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುವುದೇ ಸೂಕ್ತ. ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಅವರದ್ದೇ ಆದ ವರ್ಚಸ್ಸು, ಜನಪ್ರಿಯತೆಯಿದೆ. ಅದರಿಂದಾಗಿ ಓಟುಗಳು ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರಲಿದೆ. ಸ್ಥಳೀಯವಾಗಿ ಯಾರೇ ಅಭ್ಯರ್ಥಿಯಾದರೂ ಒಳೇಟುಗಳು ಬೀಳುವ ಸಾಧ್ಯತೆಗಳಿವೆ. ಪಕ್ಷದವರಲ್ಲಿ ಒಗ್ಗಟ್ಟು ಮೂಡಬೇಕಾದರೆ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಬೇಕು.- ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕ
---------------ಕೋಟ್.....
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕುಮಾರಸ್ವಾಮಿ ಅಥವಾ ನಿಖಿಲ್ ಯಾರೇ ಬರಲಿ ಅವರನ್ನು ನಾನು ಸ್ವಾಗತಿಸುತ್ತೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗಿಂತ ನಾಗಮಂಗಲದಲ್ಲಿ ನಿಖಿಲ್ ಅವರಿಗೆ ಹೆಚ್ಚು ಲೀಡ್ ಕೊಡಿಸಿದ್ದೇನೆ. ಈ ಬಾರಿ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷದ ನಾಯಕರು ಬರುವುದಾದರೆ ಅವರಿಗೇ ನನ್ನ ಮೊದಲ ಆದ್ಯತೆ. ಅವರ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುತ್ತೇವೆ.- ಕೆ.ಸುರೇಶ್‌ಗೌಡ, ಮಾಜಿ ಶಾಸಕ.
--------------ಕೋಟ್.....
ಇಂದಿನ ಜಿಲ್ಲೆಯ ರಾಜಕೀಯ ಪರಿಸ್ಥಿತಿಯೊಳಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆ ಅಭ್ಯರ್ಥಿಯಾಗುವುದು ಸೂಕ್ತ. ಅವರ ಬಗ್ಗೆ ಜಿಲ್ಲೆಯ ಜನರಲ್ಲಿ ಅಪಾರ ಗೌರವವಿದೆ. ಸಾಲ ಮನ್ನಾ ಯೋಜನೆಯಿಂದ ರೈತರು ಜೆಡಿಎಸ್ ಪರವಾಗಿದ್ದಾರೆ. ಅವರ ಸ್ಪರ್ಧೆಯಿಂದ ಪಕ್ಷದ ಬಲ ಹೆಚ್ಚುತ್ತದೆ. ಮುಖಂಡರು-ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಲಿದೆ.- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸದಸ್ಯರು, ವಿಧಾನಪರಿಷತ್
--------------ಲೀಡ್ ಪ್ಯಾಕೇಜ್....ಸಂಕ್ರಾಂತಿ ಬಳಿಕ ಸೀಟು ಹಂಚಿಕೆ ಫೈನಲ್: ನಿಖಿಲ್
ಕನ್ನಡಪ್ರಭ ವಾರ್ತೆ ಮಂಡ್ಯಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ನಾವು ಮೈತ್ರಿಯಾಗಿದ್ದೇವೆ. ಯಾವ ಕ್ಷೇತ್ರ ಸಿಗುವುದೋ ಗೊತ್ತಿಲ್ಲ. ಸಂಕ್ರಾಂತಿ ಬಳಿಕ ಸೀಟು ಹಂಚಿಕೆ ಫೈನಲ್ ಆಗಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಗುರುವಾರ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ನಾಯಕರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಸಿಗಬಹುದಾದ ಕ್ಷೇತ್ರಗಳು ಇನ್ನೂ ಅಂತಿಮವಾಗಿಲ್ಲ. ಯಾವುದೇ ಕ್ಷೇತ್ರ ನಮಗೆ ಸಿಗಲಿ. ನಾವು ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.ಜೆಡಿಎಸ್-ಬಿಜೆಪಿ ಮೈತ್ರಿಗೆ ದೇವೇಗೌಡರು ಮುದ್ರೆ ಹಾಕಿದ್ದಾರೆ. ಹೀಗಾಗಿ ನಾವು ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು. ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದೀರಾ. ದೇವೇಗೌಡರು, ಕುಮಾರಸ್ವಾಮಿ ಅವರಿಗೆ ನಿಮ್ಮ ಭಾವನೆ ತಿಳಿಸುತ್ತೇನೆ. ಅಂತಿಮವಾಗಿ ದೇವೇಗೌಡರು ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುತ್ತಾರೆ. ನೀವೆಲ್ಲರೂ ಏನು ಹೇಳುವಿರೋ ವರಿಷ್ಠರು ಅದನ್ನೇ ಮಾಡುತ್ತಾರೆ. ಕ್ಷೇತ್ರಗಳಲ್ಲಿ ಸಮಸ್ಯೆಗಳು ಇದ್ದರೆ ಸರಿಪಡಿಸಿಕೊಂಡು ಬಿಜೆಪಿ ಮುಖಂಡರು-ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಒಟ್ಟಾಗಿ ಕೆಲಸ ಮಾಡುವಂತೆ ತಿಳಿಸಿದರು.
---------------------