- ಶಕ್ತಿ ಯೋಜನೆಯಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಶಕ್ತಿ ಯೋಜನೆಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒತ್ತಡ ಹೆಚ್ಚುತ್ತಿದೆ. ಆದಕಾರಣ ಕನಿಷ್ಠವೆಂದರೂ 1000 ಬಸ್‌ಗಳನ್ನಾದರೂ ನೀಡಿ ಎಂಬ ಕೂಗು ಇದೀಗ ಜೋರಾಗಿ ಕೇಳಿ ಬರುತ್ತಿದೆ.
ಈ ಸಂಬಂಧ ಈಗಾಗಲೇ ಸಾರಿಗೆ ಸಚಿವರಿಗೆ ಪತ್ರ ಕೂಡ ಬರೆದಿರುವ ಸಂಸ್ಥೆಯ ನೌಕರರ ವರ್ಗ, ಇಲ್ಲದಿದ್ದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ.ವಾಯವ್ಯ ಸಾರಿಗೆ ಸಂಸ್ಥೆ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ನಗರ, ಹಾವೇರಿ, ಉತ್ತರ ಕನ್ನಡ, ಗದಗ, ಬಾಗಲಕೋಟೆ ಹೀಗೆ ಆರು ಜಿಲ್ಲೆಗಳ 9 ಘಟಕಗಳು ಈ ನಿಗಮದಡಿ ಬರುತ್ತವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯೂ ಜೂ. 11ರಂದು ಚಾಲನೆ ಸಿಕ್ಕಿದೆ. ಆಗಿನಿಂದ ಬಸ್‌ಗಳ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿದೆ.
ಮೊದಲು 12-13 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಪ್ರಯಾಣಿಸುತ್ತಿದ್ದರು. ಇದರಲ್ಲಿ 5 ಲಕ್ಷ ಮಹಿಳೆಯರು ಇರುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭವಾದ ಮೇಲೆ ಇದರ ಪ್ರಮಾಣ ದುಪ್ಪಟ್ಟು ಆಗಿದೆ. ಈಗ ಪ್ರಯಾಣಿಕರ ಸಂಖ್ಯೆ 23-24 ಲಕ್ಷಕ್ಕೇರಿದೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 13-14ಕ್ಕೇರಿದೆ. ಮಹಿಳೆಯರ ಪ್ರಯಾಣದ ಟಿಕೆಟ್ ಮೌಲ್ಯ ₹3 ಕೋಟಿ ಆಗುತ್ತಿದೆ.ಪ್ರಯಾಣವೇ ಹರಸಾಹಸ:
ಶಕ್ತಿ ಯೋಜನೆ ಅವಕಾಶವಿಲ್ಲದ ಎಸಿ, ರಾಜಹಂಸ ಹೊರತುಪಡಿಸಿ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸುವುದೆಂದರೆ ದೊಡ್ಡ ಹರಸಾಹಸವೇ ಆದಂತಾಗಿದೆ. ಮೂರು ಬಸ್‌ಗಳಲ್ಲಿ ಪ್ರಯಾಣಿಸಬಹುದಾದ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಪ್ರಯಾಣಿಸುವಂತಾಗಿದೆ. ಶಾಲಾ- ಕಾಲೇಜ್ ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ಹೋಗುವ ನೌಕರರು, ಮಾರುಕಟ್ಟೆಗೆ ಹೋಗುವ ಜನಸಾಮಾನ್ಯರಿಗೆ ಬಸ್ ಪ್ರಯಾಣ ಮಾಡುವುದೆಂದರೆ ದೊಡ್ಡ ಹರಸಾಹಸ ಎಂಬಂತಾಗಿದೆ. ಬಸ್‌ಗಾಗಿ ತಾಸುಗಟ್ಟಲೇ ಕಾಯುವುದು ಅನಿವಾರ್ಯವಾದಂತಾಗಿದೆ. ಇನ್ನು ಮೂರು ಬಸ್‌ಗಳಲ್ಲಿ ಹೋಗಬೇಕಾದ ಪ್ರಯಾಣಿಕರನ್ನು ಹೊತ್ತೊಯ್ಯವುದು ಚಾಲಕರು ಮತ್ತು ನಿರ್ವಾಹಕರಿಗೂ ಕಿರಿಕಿರಿಯಾಗುತ್ತಿದೆ.ಬಸ್ ಹೆಚ್ಚಿಸಲು ಒತ್ತಡ:
ಸರ್ಕಾರವೇನೋ ಶಕ್ತಿ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಜಾರಿಗೊಳಿಸಬೇತ್ತು. ಇದ್ದ ಬಸ್‌ಗಳಲ್ಲಿ ಶಕ್ತಿ ಯೋಜನೆ ನಿರ್ವಹಿಸುವುದು ಕಷ್ಟವಾಗುತ್ತಿದೆ. ಆದಕಾರಣ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಪುಣ್ಯ ಕಟ್ಕೊಳ್ಳಿ ಎಂಬ ಬೇಡಿಕೆ ಚಾಲಕರು ಮತ್ತು ನಿರ್ವಾಹಕರು ಇಟ್ಟಿದ್ದಾರೆ.ವಾಯವ್ಯ ಸಾರಿಗೆ ಸಂಸ್ಥೆಗೆ 1000 ಬಸ್‌ಗಳನ್ನಾದರೂ ಖರೀದಿಸಿ ನಮಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿ ಸಾರಿಗೆ ಸಚಿವರಿಗೆ ನೌಕರರ ವರ್ಗ ಮನವಿ ಮಾಡಿದೆ. ಹಾಗಂತ ಬಿಎಂಟಿಸಿಯಲ್ಲಿ ಓಡಿದ ಹಳೆ ಬಸ್‌ಗಳನ್ನು ಇಲ್ಲಿ ನೀಡದೇ ಹೊಸ ಬಸ್‌ಗಳನ್ನೇ ಖರೀದಿಸಬೇಕು ಎಂಬುದು ನೌಕರರ ಒತ್ತಾಯ.
ಅನುಮೋದನೆ:ಈ ನಡುವೆ ವಾಯವ್ಯ ಸಾರಿಗೆಗೆ ಸರ್ಕಾರ 780 ಬಸ್‌ಗಳನ್ನು ಖರೀದಿಸಲು ಅನುಮೋದನೆ ನೀಡಿದೆಯಂತೆ. ಇದರಲ್ಲಿ 660 ಸಾದಾ ಬಸ್ (ಗ್ರಾಮಾಂತರ), 100 ಬಸ್ ನಗರ ಸಾರಿಗೆ, 20 ಪಲ್ಲಕ್ಕಿ ನಾನ್ ಎಸಿ ಸ್ಲೀಪರ್, 4 ಎಸಿ ಸ್ಲೀಪರ್ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಸ್‌ಗಳನ್ನು ಬೇಗನೆ ಖರೀದಿಸಿ ಲೋಕಾರ್ಪಣೆ ಮಾಡಬೇಕು ಎಂಬುದು ಆಗ್ರಹ.
ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಬಸ್‌ನಲ್ಲಿ ಪ್ರಯಾಣಿಸುವುದೆಂದರೆ ದೊಡ್ಡ ಹರಸಾಹಸವಾಗಿದೆ. ಯೋಜನೆಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜ್ ಉಪನ್ಯಾಸಕ ರಮೇಶ ಪಾಟೀಲ ಆಗ್ರಹಿಸಿದ್ದಾರೆ.