ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಿ: ಶಾಸಕಿ ರೂಪಕಲಾ ಶಶಿಧರ್ ಸೂಚನೆ

KannadaprabhaNewsNetwork |  
Published : Aug 22, 2024, 01:02 AM IST
೨೧ಕೆಜಿಎಫ್೧ಕೆಜಿಎಫ್‌ನ ಹೊರವಲಯದ ಪಾರಂಡಹಳ್ಳಿ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆ ನಡೆಯಿತು. ಶಾಸಕಿ ರೂಪಕಲಾ ಶಶಿಧರ್, ಇಒ ಮಂಜುನಾಥ ಹರ್ತಿ ಇದ್ದರು. | Kannada Prabha

ಸಾರಾಂಶ

ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಪಡಿತರ ಚೀಟಿ ಅತ್ಯಗತ್ಯವಾದ ದಾಖಲೆಯಾಗಿದ್ದು, ಅಂತಹ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ತ್ವರಿತವಾಗಿ ಪಡಿತರ ಚೀಟಿ ವಿತರಿಸಲು ಕ್ರಮ ವಹಿಸಬೇಕು. ಶಾಲಾ- ಕಾಲೇಜುಗಳ ಪ್ರವೇಶಕ್ಕಾಗಿ ಪಡಿತರ ಚೀಟಿಗೆಂದು ಬರುವವರಿಗೂ ವಿನಃಕಾರಣ ಕಚೇರಿ ಸುತ್ತ ಅಲೆದಾಡಿಸದೇ ಶೀಘ್ರವೇ ಪಡಿತರ ಚೀಟಿಗಳನ್ನು ವಿತರಿಸಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸುವಂತೆ ಸಿಡಿಪಿಒ ಅಧಿಕಾರಿಗೆ ಶಾಸಕಿ ರೂಪಕಲಾ ಶಶಿಧರ್ ಸೂಚಿಸಿದರು.

ನಗರದ ಹೊರವಲಯದ ಪಾರಂಡಹಳ್ಳಿಯ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ ೨೮೬ ಅಂಗನವಾಡಿ ಕೇಂದ್ರಗಳಿದ್ದು, ಎಲ್ಲ ಕೇಂದ್ರಗಳಲ್ಲಿ ಮಕ್ಕಳಿಗೆ ಅನುಕೂಲಕರವಾದ ಸ್ನೇಹಮಯಿ ವಾತಾವರಣ ರೂಪಿಸುವಂತೆ ತಿಳಿಸಿದ ಅವರು, ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಕಾಲಕಾಲಕ್ಕೆ ಪೌಷ್ಠಿಕ ಆಹಾರ ನೀಡುತ್ತಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

ಈ ವೇಳೆ ಮಾತನಾಡಿದ ಸಿಡಿಪಿಒ ರಾಜೇಶ್, ತಾವು ಕೆಜಿಎಫ್ ತಾಲೂಕಿಗೆ ಬಂದು ೧೫ ತಿಂಗಳು ಕಳೆದಿದ್ದು, ಇದುವರೆಗೆ ತಾಲೂಕಿನಾದ್ಯಂತ ಸುಮಾರು ೧೯೫ ಅಂಗನವಾಡಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರಲ್ಲದೆ, ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ೧೫-೨೦ ಮಂದಿ ಮಕ್ಕಳು ನೋಂದಣಿಯಾಗಿದ್ದು, ತರಗತಿಗೆ ಕೇವಲ ೫-೬ ಮಂದಿ ಮಾತ್ರ ಹಾಜರಾಗುತ್ತಾರೆ. ಉಳಿದ ಮಕ್ಕಳನ್ನು ಪೋಷಕರೇ ಬಂದು ಕರೆದುಕೊಂಡು ಹೋಗುತ್ತಿರುವುದು ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಇದಕ್ಕೆ ಕೆಂಡಾಮಂಡಲವಾದ ಶಾಸಕಿ ರೂಪಕಲಾ ಶಶಿಧರ್, ನೋಂದಣಿಯಾಗಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬಾರದೇ ಇದ್ದರೆ ನೀವೇನು ಮಾಡುತ್ತಿದ್ದೀರಾ ? ನಿಮ್ಮ ಕೆಲಸವೇನು ? ಇಲಾಖೆ ಸಿಡಿಪಿಒ ಹುದ್ದೆಯನ್ನು ಸೃಜನೆ ಮಾಡಿರುವುದಾದರೂ ಏತಕ್ಕೆ ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೆಜಿಎಫ್ ತಾಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಬಿಇಒರಿಂದ ಮಾಹಿತಿ ಪಡೆದುಕೊಂಡರು. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಮಾಹಿತಿಯನ್ನೊಳಗೊಂಡ ವರದಿ ತಯಾರಿಸಿ ನೀಡುವಂತೆ ತಿಳಿಸಿದರು.

ಆಹಾರ ಇಲಾಖೆಗೆ ಸಂಬಂಧಿಸಿದಂತೆ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ ಸುಮಾರು ೧೨೦೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಕಾರಣವನ್ನು ಹುಡುಕಿ ಕೂಡಲೇ ಸಂಬಂಧಪಟ್ಟ ಫಲಾನುಭವಿಗಳ ಖಾತೆಗಳಿಗೆ ಗೃಹಲಕ್ಷ್ಮೀ ಯೋಜನೆ ಹಣ ತಲುಪಲು ಅಗತ್ಯವಾದ ಕ್ರಮ ವಹಿಸುವಂತೆ ಉಪ ನಿರ್ದೇಶಕ ಮಲ್ಲಿಕಾರ್ಜುನ್‌ರಿಗೆ ಸೂಚಿಸಿದರು.

ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಪಡಿತರ ಚೀಟಿ ಅತ್ಯಗತ್ಯವಾದ ದಾಖಲೆಯಾಗಿದ್ದು, ಅಂತಹ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ತ್ವರಿತವಾಗಿ ಪಡಿತರ ಚೀಟಿ ವಿತರಿಸಲು ಕ್ರಮ ವಹಿಸಬೇಕು. ಶಾಲಾ- ಕಾಲೇಜುಗಳ ಪ್ರವೇಶಕ್ಕಾಗಿ ಪಡಿತರ ಚೀಟಿಗೆಂದು ಬರುವವರಿಗೂ ವಿನಃಕಾರಣ ಕಚೇರಿ ಸುತ್ತ ಅಲೆದಾಡಿಸದೇ ಶೀಘ್ರವೇ ಪಡಿತರ ಚೀಟಿಗಳನ್ನು ವಿತರಿಸಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾತನಾಡಿ, ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಇದುವರೆಗೆ ಸುಮಾರು ೯೦ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸೊಳ್ಳೆಗಳಿಂದ ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಫಾಗಿಂಗ್ ಸೇರಿದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ನಗರಸಭೆ ಅಧಿಕಾರಿಗಳು ಕೈಗೊಳ್ಳಬೇಕೆಂದರು.

ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭ, ತಹಸೀಲ್ದಾರ್ ನಾಗವೇಣಿ, ತಾಪಂ ಇಒ ಮಂಜುನಾಥ ಹರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ