ದರ ಕುಸಿತ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ

KannadaprabhaNewsNetwork | Published : Mar 12, 2024 2:02 AM

ಸಾರಾಂಶ

ಮೆಣಸಿನಕಾಯಿ ಮಾರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನ ದರದಲ್ಲಿ ತೀವ್ರ ಕುಸಿತವಾಗಿದೆ ಎಂದು ಆರೋಪಿಸಿ ಸೋಮವಾರ ಸಾವಿರಾರು ರೈತರು ತೀವ್ರ ಹಿಂಸಾಚಾರಕ್ಕೆ ನಡೆಸಿದ್ದಾರೆ.

ಬ್ಯಾಡಗಿ: ಮೆಣಸಿನಕಾಯಿ ಮಾರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನ ದರದಲ್ಲಿ ತೀವ್ರ ಕುಸಿತವಾಗಿದೆ ಎಂದು ಆರೋಪಿಸಿ ಸೋಮವಾರ ಸಾವಿರಾರು ರೈತರು ತೀವ್ರ ಹಿಂಸಾಚಾರಕ್ಕೆ ಇಳಿದಿದ್ದಲ್ಲದೇ ಎಪಿಎಂಸಿ ಆಡಳಿತ ಕಚೇರಿಗೆ ಮೇಲೆ ದಾಳಿ ನಡೆಸಿ ಅಧ್ಯಕ್ಷ, ಕಾರ್ಯದರ್ಶಿಗಳ ವಾಹನ ಸೇರಿದಂತೆ ಎಂಟು ವಾಹನಗಳನ್ನು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಸಿಕ್ಕ ಸಿಕ್ಕ ವಾಹನ, ಅಂಗಡಿಗಳತ್ತ ಕಲ್ಲು ತೂರಿದ್ದಲ್ಲದೇ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳನ್ನು ಅಕ್ಷರಶಃ ಅಟ್ಟಾಡಿಸಿ ಹಿಮ್ಮೆಟ್ಟಿಸಿದ್ದಾರೆ. ಅಗ್ನಿಶಾಮಕ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಹಲವಾರು ವಾಹನಗಳು ಕಟ್ಟಡಗಳು ಜಖಂಗೊಂಡಿದೆ. ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಹಾಗೂ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ವಾಹನದ ಸಿಬ್ಬಂದಿಗಳು ರೈತರ ದಾಳಿಗೆ ತುತ್ತಾದರು. ಹಿರಿಯ ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಒಂದು ಹಂತದಲ್ಲಿ ಪರಿಸ್ಥಿತಿ ಹತೋಟಿ ಮೀರುವ ಸಾಧ್ಯತೆ ಕಂಡು ಬಂದರೂ ಪೊಲೀಸರು ಸಂಯಮ ತೋರಿದರು. ತಮ್ಮ ಮೇಲೆ ದಾಳಿ ನಡೆಯುತ್ತಿದ್ದರೂ ಬಲ ಪ್ರಯೋಗಿಸದೇ ಪರಿಸ್ಥಿತಿ ನಿಭಾಯಿಸಿದರು.

ಕಳೆದ ಮೂರು ವಾರದಿಂದ 3 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಆವಕವಾಗುತ್ತಿದೆ. ಆದರೆ ದರಲ್ಲಿ ಸ್ಥಿರತೆ ಇತ್ತು. ನಿರೀಕ್ಷೆಯಂತೆ ಸೋಮವಾರವೂ ಸಹ 3 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾಗಿತ್ತು, ಆದರೆ ದರದಲ್ಲಿ ನಾಲ್ಕಾರು ಸಾವಿರ ರು. ಕುಸಿತವಾಗಿದೆ ಎಂದು ಆರೋಪಿಸಿ ಕೆಲ ರೈತರು ಎಪಿಎಂಸಿ ಕಚೇರಿಯತ್ತ ತೆರಳಿ ದಿಢೀರ್‌ ಪ್ರತಿಭಟನೆ ಆರಂಭಿಸಿದರು. ಸುದ್ದಿ ತಿಳಿದು ಆಂಧ್ರ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ರೈತರು ಸೇರಿ ಎಪಿಎಂಸಿ ಕಚೇರಿಯತ್ತ ಕಲ್ಲು ತೂರಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ನಂತರ ಕಚೇರಿಯ ಮುಂಭಾಗ ನಿಂತಿದ್ದ ಮೂರು ವಾಹನಗಳಿಗೆ ಬೆಂಕಿ ಹಚ್ಚಿದರು. ಬಳಿಕ ಕಚೇರಿ ಸಿಬ್ಬಂದಿ ಕಾರುಗಳನ್ನು ಸಹ ಸುಟ್ಟು ಭಸ್ಮಗೊಳಿಸಿದರು, ಕೈಗೆ ಸಿಕ್ಕಂತಹ ಕಲ್ಲು ದೊಣ್ಣೆಗಳಿಂದ ಸಿಕ್ಕ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದರು.

ಆದರೆ ಅಷ್ಟೂ ಮೆಣಸಿನಕಾಯಿ ಚೀಲಗಳಿಗೆ ಎಂದಿನಂತೆ ಇಲ್ಲಿನ ವರ್ತಕರು ದರಗಳನ್ನು ಹಾಕಿದ್ದರು ಯಾವುದೇ ತಕರಾರಿಲ್ಲದೇ ಬಹುತೇಕ ಅಂಗಡಿಗಳಲ್ಲಿ ತೂಕವೂ ಕೂಡ ಪ್ರಾರಂಭವಾಗಿತ್ತು. ಆದರೆ, ದರದಲ್ಲಿ ಕಡಿಮೆಯಾದ ಕುರಿತು ಯಾರೊಂದಿಗೂ ಚರ್ಚಿಸದೇ ಏಕಾಏಕಿ ಪ್ರತಿಭಟನೆಯು ಹಿಂಸಾತ್ಮಕ ರೂಪವನ್ನು ತಳೆದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಆರಂಭದಲ್ಲಿ ಕಚೇರಿ ಎದುರು ನಿಂತಿದ್ದ ವಾಹನಗಳಿಗೆ ರೈತರು ಬೆಂಕಿ ಹಚ್ಚಿದರು. ಪೀಠೋಪಕರಣಗಳಿಗೂ ಅಗ್ನಿಸ್ಪರ್ಶವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ವಾಹನ, ಪೊಲೀಸರು ಬಂದರು. ರೈತರ ಆಕ್ರೋಶ ಪೊಲೀಸರತ್ತ ತಿರುಗಿತು. ಸಾವಿರಾರು ರೈತರು ಹತ್ತಾರು ಪೊಲೀಸರನ್ನು ಅಟ್ಟಿಸಿಕೊಂಡು ಹೋದರು. ಪೊಲೀಸರು ಜೀವ ಭಯದಿಂದ ಓಡುತ್ತಿದ್ದ ದೃಶ್ಯ ಎದೆ ನಡುಗಿಸುತ್ತಿತ್ತು. ಆಕಸ್ಮಿಕವಾಗಿ ನಡೆದ ಘಟನೆಯಿಂದ ಪೊಲೀಸರೂ ವಿಚಲಿತರಾದರು. ಹೆಲ್ಮೆಟ್‌, ಲಾಠಿ ಕೆಳಗೆ ಬಿದ್ದರೂ ಅದನ್ನು ಎತ್ತಿಕೊಳ್ಳುವುದೂ ಸಾಧ್ಯವಾಗದೇ ಓಡಿದರು. ಕಲ್ಲುಗಳನ್ನು ಪೊಲೀಸರತ್ತ ದೂರಲಾಯಿತು.

ಇಷ್ಟಕ್ಕೆ ಸುಮ್ಮನವಾಗದ ರೈತರ ಆಕ್ರೋಶ ಅಗ್ನಿಶಾಮಕ ವಾಹನದತ್ತ ತಿರುಗಿತು. ಬೆಂಕಿ ಹಚ್ಚಿದ ಸುದ್ದಿ ತಲುಪುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ವಾಹನ ಮತ್ತು ಅದರ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಆಗ ಸಿಟ್ಟಿಗೆದ್ದ ಪ್ರತಿಭಟನಾ ನಿರತ ರೈತರು ಅಗ್ನಿಶಾಮಕದಳದ ಸಿಬ್ಬಂದಿ ವಾಹನದಿಂದ ಕೆಳಗಿಳಿಸಿ ಅಟ್ಟಾಡಿಸಿ ಥಳಿಸಿದರಲ್ಲದೇ, ಪೆಟ್ರೋಲ್, ಡೀಸೆಲ್ ಮತ್ತಿತರವುಗಳನ್ನು ಬಳಸಿ ಅಗ್ನಿಶಾಮಕ ವಾಹನವನ್ನೇ ಸುಟ್ಟು ಭಸ್ಮಗೊಳಿಸಿದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಬೆರಳೆಣಿಕೆಯಷ್ಟು ಪೊಲಿಸರು ಲಾಠಿ ಬೀಸಲು ಮುಂದಾದಾಗ ತಿರುಗಿಬಿದ್ದ ರೈತರು ಪೊಲೀಸರನ್ನೆ ಬೆನ್ನತ್ತಿ ಥಳಿಸಿದರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೇಲೆ ಕಲ್ಲು, ದೊಣ್ಣೆ ಎಸೆದದ್ದರಿಂದ ಹಲವರು ಗಾಯಗೊಂಡರು.

ದರ ಕುಸಿತ ಆರೋಪ

ಉತ್ತಮ ದರ ಸಿಗುತ್ತದೆ ಎಂಬ ಕಾರಣಕ್ಕೆ ನಾವು ನೂರಾರು ಕಿಲೋ ಮೀಟರ್‌ ದೂರದಿಂದ ಇಲ್ಲಿಗೆ ಮೆಣಸಿನಕಾಯಿ ತಂದಿದ್ದೇವೆ. ಆದರೆ, ಕಳೆದ ವಾರಕ್ಕಿಂತ ಕಡಿಮೆ ದರ ಹಾಕಲಾಗಿದೆ ಎಂದು ತೆಲಂಗಾಣ, ಬಳ್ಳಾರಿ, ರಾಯಚೂರು ಕಡೆಯಿಂದ ಬಂದಿದ್ದ ರೈತರು ಆರೋಪಿಸಿದರು. ಬಿಗುವಿನ ವಾತಾವರಣ-ಪ್ರತಿಭಟನಾಕಾರರ ಸಂಖ್ಯೆಗಿಂತ ಪೊಲೀಸ್‌ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದ ಕಾರಣ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ಎಸ್ಪಿ ಅಂಶುಕುಮಾರ್‌ ನೇತೃತ್ವದಲ್ಲಿ ಪೊಲೀಸ್ ತುಕಡಿಗಳು ಬ್ಯಾಡಗಿ ಪಟ್ಟಣಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಸದ್ಯ ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

ಇದೊಂದು ಕರಾಳದಿವಸ: ಮೆಣಸಿನಕಾಯಿ ಗುಣಮಟ್ಟಕ್ಕೆ ತಕ್ಕಂತೆ ನಾವುಗಳು ದರ ನೀಡಿದ್ದೇವೆ, ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ, ಎಷ್ಟೇ ಮೆಣಸಿನಕಾಯಿ ಬಂದರೂ ನಾವು ಖರೀದಿಸುತ್ತೇವೆ ದರ ಕುಸಿತವಾಗಿದೆ ಎಂದಾದಲ್ಲಿ ಚರ್ಚೆ ನಡೆಸಬೇಕಿದ್ದ ರೈತರು ಏಕಾಏಕಿ ಹಿಂಸಾತ್ಮಕ ಹೋರಾಟ ಮಾಡಿದ್ದು ಮನಸ್ಸಿಗೆ ತುಂಬಾ ನೋವು ಮಾಡಿದೆ, ಮಾರುಕಟ್ಟೆ ಇತಿಹಾಸದಲ್ಲಿಯೇ ಇದೊಂದು ಕರಾಳ ದಿನ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.

Share this article