ಯಾದಗಿರಿ : ಬೆಲೆ ಏರಿಕೆಯಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು 5 ಗ್ಯಾರಂಟಿ ಕೊಟ್ಟಿದ್ದು, 6ನೇ ಗ್ಯಾರಂಟಿಗೆ ಹೆಚ್ಚು ಪ್ರಚಾರ ಕೊಟ್ಟಿಲ್ಲ, ಅದುವೇ ಬೆಲೆ ಏರಿಕೆಯ ಗ್ಯಾರಂಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ ನಗರದ ನೇತಾಜಿ ಸುಭಾಷ್ ಚಂದ್ರ ಭೋಸ್ ವೃತ್ತದಲ್ಲಿ ಬುಧವಾರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು, ಜನಸಾಮಾನ್ಯರು, ರೈತರು, ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರು ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲು ₹25 ಸಾವಿರ ಕಟ್ಟಬೇಕಿತ್ತು. ಈಗ ಕಾಂಗ್ರೆಸ್ ಆಡಳಿತದಲ್ಲಿ ₹2.5 ಲಕ್ಷದಿಂದ ₹3 ಲಕ್ಷ ಕಟ್ಟಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರವು ₹6000 ಹಾಗೂ ಯಡಿಯೂರಪ್ಪ ಅವರು ₹4000 ಕೊಡುತ್ತಿದ್ದರು. ಅದನ್ನೂ ಕೈ ಸರ್ಕಾರ ಈಗ ನಿಲ್ಲಿಸಿದೆ. ಗ್ರಾಮೀಣ ಭಾಗದಲ್ಲಿ ಬಡವರು ರಕ್ತಪರೀಕ್ಷೆ ಮಾಡಿಸಿಕೊಳ್ಳಲು 3 ರಿಂದ 4 ಪಟ್ಟು ಹೆಚ್ಚು ದರ ಕೊಡಬೇಕಾಗಿದೆ. ಹಾಲಿನ ದರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಹೆಚ್ಚಿಸಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ನರಸಿಂಹ ನಾಯಕ ರಾಜುಗೌಡ ಪಾಲ್ಗೊಂಡಿದ್ದರು.
ಕಪ್ಪು ಪಟ್ಟಿ ಧರಿಸಿ ಬಿಜೆಪಿ ಮೌನಾಚರಣೆ
ರಾಯಚೂರು: ಬಿಜೆಪಿ ಜನಾಕ್ರೋಶ ಯಾತ್ರೆ ಬುಧವಾರ ರಾಯಚೂರಿಗೆ ಆಗಮಿಸಿದ್ದು, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ನಿಗದಿಯಾಗಿದ್ದ ರ್‍ಯಾಲಿಯನ್ನು ಮೊಟಕುಗೊಳಿಸಲಾಯಿತು. ಬಿಜೆಪಿ ಮುಖಂಡರು ಕಪ್ಪು ಪಟ್ಟಿ ಧರಿಸಿ ವೇದಿಕೆಗೆ ಆಗಮಿಸಿದರು. ಮೇಣದ ಬತ್ತಿ ಹಿಡಿದು ಮೌನಾಚರಣೆ ಮಾಡಿ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಎಂಎಲ್ಸಿ ಎನ್.ರವಿಕುಮಾರ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕರು ಇದ್ದರು.