ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಜನ ಜಾಗೃತಿಗಾಗಿ ಫೆಬ್ರವರಿ ತಿಂಗಳಲ್ಲಿ ತಾಲೂಕು ಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಉಡುಪಿ: ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಜನ ಜಾಗೃತಿಗಾಗಿ ಫೆಬ್ರವರಿ ತಿಂಗಳಲ್ಲಿ ತಾಲೂಕು ಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.ನಗರದ ಮಣಿಪಾಲ ರಜತಾದ್ರಿಯ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬಅರ್ಹ ಫಲಾನುಭವಿಗೂ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ ತಾಲೂಕು ಮಟ್ಟದ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದರು.
ಡಿಸೆಂಬರ್ ೨೦೨೫ರವರೆಗೆ ಶಕ್ತಿ ಯೋಜನೆಯಡಿ ಉಡುಪಿ–ಕುಂದಾಪುರ ಘಟಕಗಳಿಂದ ಸಂಚರಿಸುವ ಸಾರಿಗೆಗಳಲ್ಲಿ ಒಟ್ಟು ೩.೫೩ ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, ಇದಕ್ಕಾಗಿ ೧೩೭.೫೯ ಕೋಟಿ ರು. ವೆಚ್ಚ ಭರಿಸಲಾಗಿದೆ ಎಂದು ವಿವರಿಸಿದರು.ಗ್ರಾಮೀಣ ಭಾಗದ ಬೇಡಿಕೆಗೆ ಅನುಗುಣವಾಗಿ ಗೋಳಿಯಂಗಡಿ–ವಡ್ಡರ್ಸೆ–ಕುಂದಾಪುರ, ಕೋಡಿಬೆಂಗ್ರೆ, ಉಡುಪಿ–ಬ್ರಹ್ಮಾವರ–ಹೆಬ್ರಿ, ಕುಂದಾಪುರ–ತಲ್ಲೂರು–ಮಾವಿನಕಟ್ಟೆ–ನೇರಳಕಟ್ಟೆ, ಬೈಂದೂರು–ಪಡುವರಿ–ಶಿರೂರು ಸೇರಿದಂತೆ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿದೆ ಎಂದರು.ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ೨,೨೪,೬೩೬ ಮಹಿಳೆಯರು ಫಲಾನುಭವಿಗಳಾಗಿದ್ದು, ಇದುವರೆಗೆ ೧೦೫೦.೯೦ ರು. ಕೋಟಿ ಅನುದಾನ ವಿತರಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ೩,೦೦,೬೪೨ ಕುಟುಂಬಗಳು ಲಾಭ ಪಡೆದಿದ್ದು, ೫೯೧.೦೭ ಕೋಟಿ ರು, ರಿಯಾಯಿತಿ ನೀಡಲಾಗಿದೆ.ಅನ್ನಭಾಗ್ಯ ಯೋಜನೆಯಡಿ ೧,೮೭,೫೭೬ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸಲಾಗಿದೆ.ಯುವನಿಧಿ ಯೋಜನೆಯಡಿ ೩೩೫೦ ಯುವ ಜನರು ಲಾಭ ಪಡೆದಿದ್ದು, ೮.೫೪ ಕೋಟಿ ರು. ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಸೇರಿದಂತೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.