ಪುತ್ತೂರು ನಗರದ ಹೊರ ವಲಯದ ಆನೆಮಜಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣ
ಪುತ್ತೂರು: ವಕೀಲರು ಮತ್ತು ಜಡ್ಜ್ ಗಳು ಮೊದಲು ನ್ಯಾಯ ಸಮ್ಮತವಾಗಿ ನಡೆಯಬೇಕು. ಆಮೇಲೆ ಇತರರಿಗೆ ಬುದ್ಧಿ ಹೇಳಬೇಕು. ಅವರು ನ್ಯಾಯ ಸಮ್ಮತ ನಡವಳಿಕೆಯಲ್ಲಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.
ಶನಿವಾರ ಪುತ್ತೂರು ನಗರದ ಹೊರ ವಲಯದ ಆನೆಮಜಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಕೋರ್ಟ್ ಗಳು ನ್ಯಾಯ ಮಂದಿರವಿದ್ದಂತೆ. ಇಲ್ಲಿ ಕೆಲಸ ಮಾಡುವವರು ತಮ್ಮ ನ್ಯಾಯ ಸಮ್ಮತ ನಡವಳಿಕೆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಆಗ ಮಾತ್ರ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ. ಇದನ್ನು ಯುವ ವಕೀಲರು ಪ್ರಥಮವಾಗಿ ಅರ್ಥ ಮಾಡಿಕೊಳ್ಳಬೇಕು. ನಮ್ಮ ನಡವಳಿಕೆ ಮೌಲ್ಯಯುತವಾಗಿದ್ದಾಗ ಇತರಿಗೆ ಆದರ್ಶ ನೀಡಲು ಸಾಧ್ಯ. ನ್ಯಾಯಾಂಗ ವ್ಯವಸ್ಥೆ, ವಕೀಲರು ಮತ್ತು ಆಡಳಿತ ವ್ಯವಸ್ಥೆ ಜತೆಯಾಗಿ ಕೆಲಸ ಮಾಡಿದ ಕಾರಣ ಇವತ್ತು ಇಷ್ಟೊಂದು ಭವ್ಯವಾದ ನ್ಯಾಯಾಲಯ ಸಂಕೀರ್ಣ ತಲೆ ಎತ್ತಿದೆ. ಈ ಸಂಕೀರ್ಣದ ರಸ್ತೆಗೆ ಬೆನೆಗಲ್ ನರಸಿಂಗ ರಾವ್ ಸಂವಿಧಾನ ಪಥ ಎಂಬ ಹೆಸರಿಡಲು ಪ್ರಯತ್ನ ನಡೆದಿರುವುದು ಸ್ವಾಗತಾರ್ಹ. ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದ ಬೆನೆಗಲ್ ನರಸಿಂಗ ರಾವ್ ಅವರು ದಕ್ಷಿಣ ಕನ್ನಡದವರೆಂಬುದು ನಮಗೆ ಹೆಮ್ಮೆಯ ಸಂಗತಿ. ಸ್ವತಃ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಬಿ.ಎನ್. ರಾವ್ ಸೇವೆ ಕೊಂಡಾಡಿದ್ದಾರೆ ಎಂದು ಹೇಳಿದರು.ಪುತ್ತೂರು ಬಹಳ ಮಹತ್ವದ ಊರಾಗಿದ್ದು, ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇಗುಲ, ಪಂಚಮುಖಿ ಆಂಜನೇಯ ದೇಗುಲ ಪ್ರಸಿದ್ಧವಾಗಿದೆ. ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವರ ಕುರಿತ ಸಿನಿಮಾವನ್ನು ನಾನು ಬಹಳ ಹಿಂದೆ ನೋಡಿದ್ದೆ. ಕೋಟಿ ಚೆನ್ನಯರು ಪುತ್ತೂರಿನವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಪುತ್ತೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಂಗ ಚರಿತ್ರೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಸಾಂವಿಧಾನಿಕ ಆಡಳಿತ ಮತ್ತು ನೆಲದ ಕಾನೂನಿನ ಶ್ರೇಷ್ಠತೆಯನ್ನು ಇದು ಪ್ರತಿನಿಸುತ್ತದೆ ಎಂದು ಹೇಳಿದ ಅವರು, ಕರ್ನಾಟಕದಾದ್ಯಂತ ನ್ಯಾಯಾಲಯ ಕಟ್ಟಡಗಳ ನವೀಕರಣಕ್ಕೆ ಹೈಕೋರ್ಟ್ ಬದ್ಧವಾಗಿದೆ. ಕೇವಲ ನ್ಯಾಯಾಲಯದ ಮೂಲ ಸೌಕರ್ಯ ಅಭಿವೃದ್ಧಿಯಾದರೆ ಮಾತ್ರ ನ್ಯಾಯದಾನ ಖಾತ್ರಿಯಾಗುವುದಿಲ್ಲ. ಬದಲಾಗಿ ಇಲ್ಲಿ ಕೆಲಸ ಮಾಡುವವರು ಹೊಂದಿರುವ ಸಾಮಾಜಿಕ ಬದ್ಧತೆ ಮತ್ತು ದೂರದೃಷ್ಟಿಯು ನ್ಯಾಯದಾನವನ್ನು ಖಾತ್ರಿಪಡಿಸುತ್ತದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನ್ಯಾಯಾಲಯಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಶೇ.೩೦ ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಸಿಕ್ಕಿದೆ. ಹುದ್ದೆ ಭರ್ತಿ ಮಾಡುವಲ್ಲಿ ರಾಜ್ಯ ಸರಕಾರದ ಕಡೆಯಿಂದ ಏನು ಮಾಡಬೇಕೋ ಅದನ್ನು ಮಾಡಲಾಗುವುದು. ನ್ಯಾಯಾಲಯದಲ್ಲಿ ಇರುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು. ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ೬೦ ಕೋಟಿ ರು. ವೆಚ್ಚದಲ್ಲಿ ಬ್ಲಾಕ್ ಎ ನಿರ್ಮಾಣ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ೯ ಕೋಟಿ ರು. ವೆಚ್ಚದ ನ್ಯಾಯಾಲಯ ಕಟ್ಟಡಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಟಿ. ನರೇಂದ್ರ ಪ್ರಸಾದ್ ಮಾತನಾಡಿ, ಮಧ್ಯಸ್ಥಿಕೆ ಮತ್ತು ಲೋಕ ಅದಾಲತ್‌ಗಳ ಮೂಲಕ ಆದಷ್ಟು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥ ಮಾಡುವಲ್ಲಿ ವಕೀಲರು ಹೆಚ್ಚಿನ ಶ್ರಮ ವಹಿಸಬೇಕು ಎಂದರು.
ಶಾಸಕ ಅಶೋಕ್ ರೈ, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೈಕೋರ್ಟ್ ಸಂಚಾರಿ ಪೀಠವನ್ನು ಜಿಲ್ಲೆಯಲ್ಲಿ ಆರಂಭಿಸುವಂತೆ ಆಗ್ರಹಿಸಿದರು. ಹೈಕೋರ್ಟ್ ಮಹಾ ಲೇಖಾಧಿಕಾರಿ ಕೆ.ಎಸ್. ಭರತ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಗೋಕುಲ್‌ದಾಸ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ , ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್‍ಯದರ್ಶಿ ಚಿನ್ಮಯ ರೈ ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ಸ್ವಾಗತಿಸಿದರು. ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ ಸಹಕರಿಸಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ ರೈ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ವಂದಿಸಿದರು.ರಾಜ್ಯಪಾಲ ಅಬ್ದುಲ್ ನಜೀರ್, ಹೈಕೋಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರುಂ, ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಶಾಸಕ ಅಶೋಕ್ ರೈ ಅವರನ್ನು ಸನ್ಮಾನಿಸಲಾಯಿತು.