ಲಕ್ಷ್ಮೇಶ್ವರ:ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿ ಅಮಾನವೀಯ ಕೃತ್ಯ. ಹಿಂದೂಗಳ ಮಾರಣಹೋಮ ಮಾಡಿದ ಉಗ್ರರನ್ನು ಪ್ರಧಾನಿ ನರೇಂದ್ರ ಮೋದಿಯವರು ಸದೆಬಡಿಯಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಬಾಳಿಹಳ್ಳಿಯವರ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಧಾರ್ಮಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅಲ್ಲಿ ಕೇಂದ್ರ ಸರ್ಕಾರ ಆರ್ಟಿಕಲ್ ೩೭೦ನ್ನು ತೆಗೆದು ಹಾಕಿದ್ದಕ್ಕಾಗಿ ಉಗ್ರರು ಈ ದಾಳಿ ನಡೆಸಿದ್ದಾರೆ. ಉಗ್ರರ ದಾಳಿ ಭಾರತೀಯರಿಗೆ ಆಘಾತ ಉಂಟು ಮಾಡಿದೆ. ಉಗ್ರಗಾಮಿಗಳನ್ನು ಸದೆ ಬಡಿಯಲು ಮೋದಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಸ್ವಾಗತಾರ್ಹ. ಕಾಶ್ಮೀರದಲ್ಲಿ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದರು.
‘ಲಕ್ಷ್ಮೇಶ್ವರ ಐತಿಹಾಸಿಕ ನಗರ. ಲಿಂ.ರಂ.ಜ. ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ನಡೆದಾಡಿದ ಪುಣ್ಯ ಭೂಮಿ. ಇಲ್ಲಿನ ಜನರಲ್ಲಿ ಧಾರ್ಮಿಕ ಮನೋಭಾವ ಇದೆ. ಇಂದಿನ ವೈಚಾರಿಕ ದಿನಗಳಲ್ಲಿ ವೈಯಕ್ತಿಕ ಸಂಬಂಧಗಳು ಹಾಳಾಗುತ್ತಿವೆ. ಆದರೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದರ ಮೂಲಕ ಮತ್ತೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕೆಲಸ ಆಗಬೇಕಾಗಿದೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಹಣ ಗಳಿಸುವ ಧಾವಂತದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.
ರೇವಣಸಿದ್ದಯ್ಯ ಬಾಳಿಹಳ್ಳಿಮಠ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ‍್ಯ ಸ್ವಾಮೀಜಿ, ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿದರು.ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ‍್ಯ ಸ್ವಾಮೀಜಿ, ಗಂಜಿಗಟ್ಟಿಯ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ‍್ಯ ಸ್ವಾಮೀಜಿ, ಬಂಕಾಪುರ ಆರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸೂಡಿ-ಗದಗ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಸ್ವಾಮೀಜಿ, ಚಂದ್ರು ಬಾಳಿಹಳ್ಳಿಮಠ, ವೀರಣ್ಣ ಪವಾಡದ, ಶಿವಣ್ಣ ಕೆಸರಳ್ಳಿ, ನಿಂಗಪ್ಪ ಹುನಗುಂದ, ಎಂ.ಕೆ. ಕಳ್ಳಿಮಠ, ಗುರುಪಾದಯ್ಯ ಸಾಲಿಮಠ ಹಾಗೂ ಗದಗ, ಲಕ್ಷ್ಮೇಶ್ವರದ ಬಾಳಿಹಳ್ಳಿಮಠ ಕುಟುಂಬಸ್ಥರು ಇದ್ದರು.