ಕನ್ನಡಪ್ರಭ ವಾರ್ತೆ ಮಂಡ್ಯ
ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಕರ್ನಾಟಕಕ್ಕೆ ಖಾಲಿ ಚೊಂಬು ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ರಾಷ್ಟ್ರದಲ್ಲಿ ಚೊಂಚು ಸಂಸ್ಕೃತಿಯನ್ನು ಬೆಳೆಸಿದ್ದೇ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾನುವಾರ ಟೀಕಿಸಿದರು.15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ 58 ಸಾವಿರ ಕೋಟಿ ರು. ಬರಬೇಕು, ಎನ್‌ಡಿಆರ್‌ಎಫ್ ನಿಯಮದಡಿ ಬರ ಪರಿಹಾರವಾಗಿ 18 ಸಾವಿರ ಕೋಟಿ ರು. ಬರಬೇಕು. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ರಾಜ್ಯಕ್ಕೆ ಒಂದು ರುಪಾಯಿ ಹಣವೂ ಬಂದಿಲ್ಲ. ಕೇಳಿದರೆ ಖಾಲಿ ಮೋದಿ ಅವರು ಚೊಂಬು ತೋರಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ತಮ್ಮ ಹಕ್ಕಿನ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ. ಎಲ್ಲದಕ್ಕೂ ಖಾಲಿ ಚೊಂಬು ತೋರಿಸುತ್ತಿರುವ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಮೋದಿ ತೊಡೆಯ ಮೇಲೆ ಕುಳಿತಿರುವ ಎಚ್.ಡಿ.ಕುಮಾರಸ್ವಾಮಿ ಮೋದಿಗೆ ಬೆಂಬಲ ನೀಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.ರಾಜ್ಯ ಸರ್ಕಾರದ ಯೋಜನೆಗಳಿಂದ ಪ್ರತಿ ವರ್ಷ 58 ಸಾವಿರ ಕೋಟಿ ರು. ಹಣ ನೇರವಾಗಿ ಸಾರ್ವಜನಿಕರ ಖಾತೆ ಸೇರುತ್ತಿದೆ. ಇದನ್ನು ಸಹಿಸದ ನರೇಂದ್ರ ಮೋದಿ ರಾಜ್ಯ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ರೈತ ವಿರೋಧಿ, ಜನ ವಿರೋಧಿ ನೀತಿ ಅನುಸರಿಸುತ್ತಿದ್ಧಾರೆ. ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ, ಆದರೆ ಉದ್ಯಮಿಗಳ 16 ಸಾವಿರ ಕೋಟಿ ರು.ಸಾಲ ಮನ್ನಾ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದರು.
ಬಿಜೆಪಿಯ ಹಿರಿಯ ಮುಖಂಡರಿಗೆ ಟಿಕೆಟ್ ನಿರಾಕರಿಸುವ ಮೂಲಕ ನರೇಂದ್ರ ಮೋದಿ ತಮ್ಮ ಮನೆಯನ್ನೇ ನಾಶ ಮಾಡಿದ್ಧಾರೆ. 2004ರಲ್ಲೇ ಬಿಜೆಪಿ ಸಹವಾಸ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಜೆಡಿಎಸ್-ಬಿಜೆಪಿಯಿಂದ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಅವುಗಳನ್ನು ಟೀಕಿಸುತ್ತಿದ್ದಾರೆ. ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ,
ಯುವನಿಧಿಯಿಂದ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತಿದೆ. ಇಂತಹ ರೈತಪರ, ಜನಪರ ಯೋಜನೆಗಳನ್ನು ವಿರೋಧಿಸುತ್ತಿರುವ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ವಿಜಯೇಂದ್ರ ರೈತ-ಜನ ವಿರೋಧಿಗಳು ಎಂದು ಟೀಕಿಸಿದರು.ಬಿಜೆಪಿಯವರಂತೆ ನಾವು ಸುಳ್ಳು ಹೇಳುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ಇಂದಿಗೂ ಅಚ್ಛೇ ದಿನ್ ಆಯೇಗಾ ಎನ್ನುತ್ತಲೇ ಇದ್ದಾರೆ. ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ರಸಗೊಬ್ಬರ ಸಹಾಯಧನ ಇಳಿಸಿದ್ದರ ಬಗ್ಗೆ ಮಾತನಾಡುತ್ತಿಲ್ಲ.
ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳದ ಬಗ್ಗೆ ಮಾತನಾಡುವುದಿಲ್ಲ. ಬಡವರು, ಮಧ್ಯಮವರ್ಗ, ಕಾರ್ಮಿಕ ವಿರೋಧಿ ನೀತಿಗಳನ್ನೇ ಜಾರಿಗೊಳಿಸುತ್ತಿರುವ ಬಿಜೆಪಿ ನಿರಂತರವಾಗಿ ರೈತ ವಿರೋಧಿ-ಜನವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ತನ್ವೀರ್ ಸೇಠ್ , ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇತರರಿದ್ದರು.