ಜಿಲ್ಲೆಯಲ್ಲಿ ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ನೀಡಿ

KannadaprabhaNewsNetwork |  
Published : Mar 05, 2025, 12:33 AM IST
ಕಾಗೇರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಚಿಕ್ಕ ಹಿಡುವಳಿಗಳು ಇರುವುದರಿಂದ ಕೃಷಿಯಿಂದ ರೈತರಿಗೆ ಲಾಭದಾಯವಾಗುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಸಂಪೂರ್ಣ ಗುರಿ ಸಾಧಿಸುವ ಮೂಲಕ ರೈತರಿಗೆ ಯೋಜನೆಯ ಪ್ರಯೋಜನ ಒದಗಿಸಬೇಕು

ಕಾರವಾರ: ಕೇಂದ್ರದ ಕೃಷಿ ಯಾಂತ್ರೀಕರಣ ಉಪ ಆಭಿಯಾನ ಯೋಜನೆಯಡಿ ಜಿಲ್ಲೆಯ ಕೃಷಿಕರಿಗೆ ಕೃಷಿ ಯಂತ್ರೋಪಕರಣ ಒದಗಿಸುವ ಮೂಲಕ ಜಿಲ್ಲೆಯಲ್ಲಿ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ದೇಶನ ನೀಡಿದರು.

ಅವರು ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಚಿಕ್ಕ ಹಿಡುವಳಿಗಳು ಇರುವುದರಿಂದ ಕೃಷಿಯಿಂದ ರೈತರಿಗೆ ಲಾಭದಾಯವಾಗುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಸಂಪೂರ್ಣ ಗುರಿ ಸಾಧಿಸುವ ಮೂಲಕ ರೈತರಿಗೆ ಯೋಜನೆಯ ಪ್ರಯೋಜನ ಒದಗಿಸಬೇಕು. ಆತ್ಮ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಕೃಷಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಎಂದರು.

ಜಿಲ್ಲೆಯಲ್ಲಿ ಹಲಸು ಬೆಳೆ ಹೇರಳವಾಗಿದ್ದು, ಸೂಕ್ತ ರೀತಿಯಲ್ಲಿ ಬಳಕೆ ಮಾಡದ ಕಾರಣ ವ್ಯರ್ಥವಾಗುತ್ತಿದ್ದು, ಅತ್ಯಧಿಕ ಪೌಷ್ಠಿಕಾಂಶ ಹೊಂದಿರುವ ಇದನ್ನು ಮೌಲ್ಯ ವರ್ಧನೆ ಮಾಡಿ ಹಲಸಿನಿಂದ ತಯಾರಿಸುವ ಆಹಾರ ಪದಾರ್ಥಗಳ ಫುಡ್ ಪ್ರೊಸೆಸಿಂಗ ಯೂನಿಟ್ ಸ್ಥಾಪನೆಗೆ ರೈತರ ಮನವೊಲಿಸಿ ಇದರಿಂದ ಸ್ವಯಂ ಉದ್ಯೋಗ ಸೃಷ್ಟಿಗೆ ಕೂಡಾ ಅವಕಾಶವಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಕುರಿತಂತೆ ಹೊಸ ಸಂಶೋಧನೆಗಳು ನಡೆಯಬೇಕು ಎಂದರು.

ಜಿಲ್ಲೆಯಲ್ಲಿ ನಡೆದಿರುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಾಗಿ ಜಿಲ್ಲೆಗೆ ₹ 966 ಕೋಟಿ ಮಂಜೂರಾಗಿದ್ದು ಹಾಗೂ ₹800 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಜಿಲ್ಲೆಗೆ ಬಂದಿದೆ. ಈ ಎಲ್ಲ ಕಾಮಗಾರಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೈಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದರು.

ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಪಿಎಂ ಸೂರ್ಯ ಘರ್ ಯೋಜನೆ ಅಳವಡಿಸುವಂತೆ ಮತ್ತು ಯೋಜನೆಯಡಿ ಈವರೆಗೆ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಅದರ ನಿರ್ವಹಣೆ ಬಗ್ಗೆ ವರದಿ ನೀಡಬೇಕು. ಎಲ್ಲ ಸರ್ಕಾರಿ ಕಚೇರಿಗಳು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಬೇಕು ಎಂದರು.

ಪಿಎಂ ಆವಾಸ್ ಯೋಜನೆಗೆ ಜಿಲ್ಲೆಗೆ 23,000 ಮನೆ ಮಂಜೂರಾಗಿದ್ದು, ಅರ್ಹ ಎಲ್ಲರಿಗೂ ಇದರ ಪ್ರಯೋಜನ ಒದಗಿಸುವಂತೆ ತಿಳಿಸಿದ ಅವರು, ಪಿಎಂ ವಿಶ್ವಕರ್ಮ ಯೋಜನೆ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರಕಿಸಿ ಪ್ರಗತಿ ಸಾಧಿಸಿ, ಯೋಜನೆಯಡಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕರಿಸಬೇಡಿ ಎಂದರು.

ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಪಂ ಆಡಳಿತಾಧಿಕಾರಿ ಸುಷ್ಮಾ ಗೋಡಬೋಲೆ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ