ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿಯ ಕೃಷ್ಣಾ ನದಿ ತೀರದ ಹಿನ್ನೀರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ ರೈತ ಸಂಘಟನೆ ಮುಖಂಡರು, ಸಂಪ್ರದಾಯದಂತೆ ನೀರಲ್ಲಿ ಮುಳುಗಿ ನಂತರ ಕ್ರಿಯಾಕರ್ಮಗಳನ್ನು ನೆರವೇರಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಪಿಂಡವನ್ನು ಇಟ್ಟು, ಅದರ ಮೇಲೆ ಕರಿ ಎಳ್ಳು ಹಾಕಿ ದರ್ಬೆ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಬಳಿಕ, ಭಾವಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ಹರಿ ಬಿಟ್ಟು ಆಕ್ರೋಶ ಹೊರಹಾಕಿದರು.
ರೈತರ ಪಾಲಿಗೆ ಇನ್ನಿಲ್ಲದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಆಲಮಟ್ಟಿಯ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿದ್ದನ್ನು ಖಂಡಿಸಿ ವಿಜಯಪುರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಇದರ ಭಾಗವಾಗಿ ಇದೀಗ ಅಣಕು ಪಿಂಡ ಪ್ರದಾನ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ರೈತ ಸಂಘದ ಪದಾಧಿಕಾರಿಗಳು ನದಿಯಲ್ಲಿ ಇಳಿದು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಅರವಿಂದ ಕುಲಕರ್ಣಿ, ಅವಳಿ ಜಿಲ್ಲೆಯ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸಿ ಆಲಮಟ್ಟಿ ಜಲಾಶಯದ ನೀರನ್ನು ಸಂಪೂರ್ಣ ಖಾಲಿ ಮಾಡಲು ಹೊರಟಿದೆ. ತೆಲಂಗಾಣಕ್ಕೆ ಕೇವಲ 1.27 ಟಿ.ಎಮ್.ಸಿ ಮಾತ್ರ ನೀರು ಹರಿ ಬಿಟ್ಟಿದ್ದೇವೆಂದು ಹೇಳಿ, ಫೆ.17 ರಿಂದ ಇಲ್ಲಿಯವರೆಗೂ 10 ಟಿ.ಎಮ್.ಸಿ ಗೂ ಅಧಿಕ ನೀರು ಹರಿಸಲಾಗಿದೆ. ಸರ್ಕಾರದ ಈ ರೈತ ವಿರೋಧಿ ನೀತಿ ಅನುಸರಿಸಿ ಅವಳಿ ಜಿಲ್ಲೆಯ ರೈತರಿಗೆ ಘೋರ ಅನ್ಯಾಯ ಮಾಡಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೋಟ್
ಅರವಿಂದ ಕುಲಕರ್ಣಿ, ರೈತ ಮುಖಂಡ