ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಕಾಮಗಾರಿಗಳ ಪ್ರಗತಿಗೆ ಆದ್ಯತೆ ನೀಡಿ

KannadaprabhaNewsNetwork |  
Published : May 28, 2025, 12:01 AM IST
456464 | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯು ಐತಿಹಾಸಿಕ ಪ್ರವಾಸಿ ತಾಣ ಹೊಂದಿದ್ದು, ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಬ್ರ್ಯಾಂಡ್ ಕೊಪ್ಪಳ ಕಾರ್ಯಕ್ರಮದಡಿ ಜಿಲ್ಲೆಗೆ ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಬೇಕು.

ಕೊಪ್ಪಳ:

ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಕರೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯು ಐತಿಹಾಸಿಕ ಪ್ರವಾಸಿ ತಾಣ ಹೊಂದಿದ್ದು, ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಬ್ರ್ಯಾಂಡ್ ಕೊಪ್ಪಳ ಕಾರ್ಯಕ್ರಮದಡಿ ಜಿಲ್ಲೆಗೆ ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಬೇಕು. ಜಿಲ್ಲೆಯ ಐತಿಹಾಸಿಕ ತಾಣಗಳ ಬಗ್ಗೆ ವೆಬ್‌ಸೈಟ್ ಅಥವಾ ಆನ್‌ಲೈನ್ ಮೂಲಕ ಹೆಚ್ಚಿನ ಪ್ರಚಾರಪಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ, ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಅಭಿವೃದ್ಧಿ, ಹಿರೇಬೇಣಕಲ್ ಗ್ರಾಮದ ಮೋರೆರ್ ಬೆಟ್ಟದ ಅಭಿವೃದ್ಧಿ, ಇಟಗಿಯ ಮಹಾದೇವ ಕೊಪ್ಪಳ ಕೋಟೆ, ಹುಲಿಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.

ಐತಿಹಾಸಿಕ ಸ್ಮಾರಕಗಳ ಗುರುತಿಸಬೇಕು ಹಾಗೂ ಅವುಗಳ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ₹ 100 ಕೋಟಿ ಅನುದಾನದಲ್ಲಿ ಅಂಜನಾದ್ರಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ಶಾಪಿಂಗ್ ಕಾಂಪ್ಲೆಕ್ಸ್, ಶೌಚಾಲಯ ನಿರ್ಮಾಣ, ಪ್ರದಕ್ಷಿಣಾ ಪಥ ಹಾಗೂ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ವೇಗ ನೀಡಬೇಕು. ಇದರೊಂದಿಗೆ ಕಾಮಗಾರಿಗಳಿಗೆ ಸರ್ಕಾರ ಮತ್ತೆ ₹ 100 ಕೋಟಿ ಅನುದಾನ ನೀಡಿದ್ದು, ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಬಳಿಕ ಹೊಸ ಕಾಮಗಾರಿಗಳ ಅನುಷ್ಠಾನಕ್ಕಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಹೇಳಿದರು.

ಹುಲಿಗೆಮ್ಮ ದೇವಿ ದೇವಸ್ಥಾನ ಹಾಗೂ ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮತ್ತು ಒಂದು ಜಿಲ್ಲೆ-ಒಂದು ತಾಣ ಯೋಜನೆ ಅಡಿ ಇಟಗಿ ಮಹಾದೇವ ದೇವಾಲಯವನ್ನು ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ (ಪಿಪಿಪಿ) ಸಮಗ್ರ ಅಭಿವೃದ್ಧಿ ಮಾಡಬೇಕು. ಹಿರೇಬೆಣಕಲ್ ಗ್ರಾಮದ ಮೋರೆರ ಬೆಟ್ಟದ ಸುತ್ತಮುತ್ತಲಿನ ಪ್ರದೇಶವು ಭಾರತೀಯ ಸರ್ವೇಕ್ಷಣಾ ಇಲಾಖೆ ಹಂಪಿ ವೃತ್ತ, ಅರಣ್ಯ ಇಲಾಖೆಗೆ ಒಳಪಟ್ಟಿದ್ದು, ಈ ಬೆಟ್ಟದ ಅಭಿವೃದ್ಧಿ ದೃಷ್ಟಿಯಿಂದ ಈ ಬೆಟ್ಟಕ್ಕೆ ತೆರಳಲು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು. ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸೈನೇಜ್ ಮತ್ತು ಹೋರ್ಡಿಂಗ್ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ ಹಾಗೂ ಮುಂತಾದ ಮೂಲಭೂತ ಸೌಲಭ್ಯ ಒದಗಿಸಲು ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ್ ಮಾಲಗಿತ್ತಿ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ. ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರ್‌ರು ಹಾಗೂ ಕಾಮಗಾರಿಗಳ ಅನುಷ್ಠಾನ ಏಜೆನ್ಸಿಯವರು ಉಪಸ್ಥಿತರಿದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌