ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಸ್ವಾಯತ್ತತೆ ಹಾಗೂ ಗೌರವವನ್ನು ಮರುಸ್ಥಾಪಿಸಿ, ಸಂಸ್ಥೆಯನ್ನು ಮತ್ತೆ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವನ್ನಾಗಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಆಡಳಿತದ ಅವಧಿಯಲ್ಲಿ ಸುಮಾರು ₹8 ಕೋಟಿ ಅವ್ಯವಹಾರ ನಡೆದಿರುವ ಆರೋಪಗಳಿದ್ದು, ಈ ಕುರಿತು ವಿಚಾರಣೆ ಪೂರ್ಣಗೊಂಡು ತೀರ್ಪು ಬಾಕಿಯಿದೆ. ಪರಿಷತ್ತಿನ ಹಣ ಹಾಗೂ ಆಸ್ತಿಯನ್ನು ಸಂರಕ್ಷಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ತಮ್ಮ ಉದ್ದೇಶವಾಗಿದೆ. ರಾಜ್ಯದ ಹಿರಿಯ ಸಾಹಿತಿಗಳು, ಕಲಾವಿದರು ಹಾಗೂ ಕನ್ನಡಪರ ಹೋರಾಟಗಾರರ ಒತ್ತಾಸೆಯ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ. ಈಗಾಗಲೇ 23 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಸದಸ್ಯರ ಬೆಂಬಲ ಕೋರಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಎಲ್ಲ ಜಿಲ್ಲೆಗಳಿಂದ ತಲಾ ಒಬ್ಬರನ್ನು ಒಳಗೊಂಡ ಮಾರ್ಗದರ್ಶಕ ಮಂಡಳಿ ರಚಿಸಲಾಗುವುದು. ಸ್ಥಗಿತಗೊಂಡಿರುವ ಕನ್ನಡ ಭಾಷಾ ತರಗತಿಗಳನ್ನು ಪುನರಾರಂಭಿಸುವುದು. ‘ಕನ್ನಡ ನುಡಿ’ ಮಾಸಿಕವನ್ನು ಮರುಪ್ರಕಟಿಸುವುದು, ಯುವ ಬರಹಗಾರರಿಗೆ ತರಬೇತಿ ಶಿಬಿರ ಆಯೋಜಿಸುವುದು ಹಾಗೂ ಚಂಪಾ ಅವರ ಅವಧಿಯಲ್ಲಿ ಆರಂಭಗೊಂಡಿದ್ದ ಪುಸ್ತಕ ಸಂತೆ ಯೋಜನೆಗೆ ಮರುಚಾಲನೆ ನೀಡುವುದು ತಮ್ಮ ಆದ್ಯತೆಗಳಾಗಿವೆ. ಕೇಂದ್ರ ಮತ್ತು ಜಿಲ್ಲಾ ಪರಿಷತ್ತುಗಳ ಮೂಲಕ ಪ್ರತಿ ತಿಂಗಳು ಪುಸ್ತಕ ಸಂತೆ ಆಯೋಜಿಸುವ ಉದ್ದೇಶವಿದೆ ಎಂದರು.ಸುಮಾರು 4.5 ಲಕ್ಷ ಸದಸ್ಯರನ್ನು ಹೊಂದಿರುವ ಪರಿಷತ್ತಿನ ಅಂತಿಮ ಸದಸ್ಯರ ಪಟ್ಟಿ ಸಿದ್ಧವಾದ ಬಳಿಕ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿದೆ ಎಂದರು.ಹಿರಿಯ ಸಾಹಿತಿ ಆರ್.ಜೆ. ಹಳ್ಳಿ ನಾಗರಾಜ ಮಾತನಾಡಿ, ಹಿಂದಿನ ಅಧ್ಯಕ್ಷರ ವಿರುದ್ಧದ ಹೋರಾಟದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಅಸ್ಮಿತೆಯನ್ನು ಉಳಿಸುವ ಉದ್ದೇಶದಿಂದ ಜಾಣಗೆರೆ ವೆಂಕಟರಾಮಯ್ಯ ಅವರ ಸ್ಪರ್ಧೆಗೆ ಬೆಂಬಲ ನೀಡಿದ್ದೇವೆ. ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ್ ನಾಯಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳ ಪರಿಷತ್ತಾಗಬೇಕು. ಜಾಣಗೆರೆ ವೆಂಕಟರಾಮಯ್ಯ ಅವರಿಗೆ ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ಇರುವುದರಿಂದ ಜಿಲ್ಲೆಯಲ್ಲಿ ಅವರಿಗೆ ಬಹುಮತ ಕೊಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.ಹಿರಿಯ ಸಾಹಿತಿ ಎಸ್.ಸಿ. ಸಿದ್ದರಾಮಯ್ಯ, ಕಸಾಪದ ಜೆ.ಡಿ. ಮನೋಜೆ ಮಾತನಾಡಿದರು. ಪಿ.ಎಸ್. ರಾಣೆ ವಂದಿಸಿದರು. ಕಸಾಪ ಕಾರವಾರ ತಾಲೂಕಾಧ್ಯಕ್ಷ ರಾಮಾ ನಾಯ್ಕ, ಯಮುನಾ ಗಾಂವಕರ ಹಾಗೂ ಸೂರಜ್ ಕೂರಮಕರ್ ಉಪಸ್ಥಿತರಿದ್ದರು.