ಗುಣಮಟ್ಟದ ವೈದ್ಯಕೀಯ ಸೇವೆಗೆ ಆದ್ಯತೆ ಸಿಗಲಿ: ಎಸ್ಪಿ ರೋಹನ್ ಜಗದೀಶ್

KannadaprabhaNewsNetwork |  
Published : Jul 03, 2026, 02:30 AM IST
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿದರು. | Kannada Prabha

ಸಾರಾಂಶ

, ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಸೇವೆಯ ಪ್ರತೀಕವಾಗಿದೆ. ಸಮಾಜದ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಗದಗ: ಕೋವಿಡ್‌ನಂತಹ ಸಂಕಷ್ಟದ ಸಂದರ್ಭಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರ ಆರೋಗ್ಯ ರಕ್ಷಣೆಗೆ ಶ್ರಮಿಸಿದ ವೈದ್ಯರ ಸೇವೆ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಅದೇ ರೀತಿ ಗುಣಮಟ್ಟದ ವೈದ್ಯಕೀಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.ನಗರದ ಕೆಎಚ್‌ಪಿಐಎಂಎಸ್ ಉಪನ್ಯಾಸ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ವತಿಯಿಂದ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಸೇವೆಯ ಪ್ರತೀಕವಾಗಿದೆ. ಸಮಾಜದ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂಕಷ್ಟದ ಪ್ರತಿಯೊಂದು ಘಟ್ಟದಲ್ಲೂ ವೈದ್ಯ ಸಮುದಾಯ ನಿಸ್ವಾರ್ಥ ಸೇವೆ ಸಲ್ಲಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಐಎಂಎ ಗದಗ ಶಾಖೆಯ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡುವ ಜತೆಗೆ ಅನಧಿಕೃತ ವೈದ್ಯಕೀಯ(ಕ್ವಾಕ್ ಪ್ರಾಕ್ಟೀಸ್) ವಿರುದ್ಧ ವೈದ್ಯರು ಸಂಘಟಿತವಾಗಿ ಹೋರಾಡಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿ ಬಹುವಿಶೇಷತೆ ಆಸ್ಪತ್ರೆಗಳು ಹೆಚ್ಚುತ್ತಿರುವ ಹಿನ್ನೆಲೆ ವೈದ್ಯರ ನಡುವಿನ ಸೌಹಾರ್ದ, ವೃತ್ತಿ ನೈತಿಕತೆ ಹಾಗೂ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ನರ್ಸಿಂಗ್ ನೇಮಕಾತಿಯಲ್ಲಿ ಎಚ್ಚರಿಕೆ ವಹಿಸಬೇಕು. ವೈದ್ಯರು ತಮ್ಮ ವೃತ್ತಿಯಷ್ಟೇ ತಮ್ಮ ಆರೋಗ್ಯ ಹಾಗೂ ಕುಟುಂಬಕ್ಕೂ ಸಮಯ ಮೀಸಲಿಡುವುದು ಅಗತ್ಯ ಎಂದರು.ಕೆಎಚ್‌ಪಿಐಎಂಎಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಳ್ಳಿ ಮಾತನಾಡಿ, ಭಾರತದ ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿ.ಸಿ. ರಾಯ್ ಅವರ ಆದರ್ಶ ಸೇವೆಯನ್ನು ಸ್ಮರಿಸಿದ ಅವರು, ಪ್ರತಿಯೊಬ್ಬ ವೈದ್ಯರೂ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಪ್ರಕಾಶ್ ಎಸ್. ನೀಲಗುಂದ ಮಾತನಾಡಿದರು. ಐಎಂಎ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ, ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಖಜಾಂಚಿ ಡಾ. ಜಯರಾಜ ಪಾಟೀಲ, ಐಎಂಎ ಲೇಡೀಸ್ ವಿಂಗ್ ಖಜಾಂಚಿ ಡಾ. ಜ್ಯೋತಿ ಪಾಟೀಲ ಸೇರಿದಂತೆ ಜಿಲ್ಲೆಯ ವೈದ್ಯರು, ವೈದ್ಯಕೀಯ ವೃತ್ತಿಪರರು ಇದ್ದರು. ಐಎಂಎ ಲೇಡೀಸ್ ವಿಂಗ್ ಅಧ್ಯಕ್ಷೆ ಡಾ. ಸುನಿತಾ ಎಸ್. ಕುರಡಗಿ ಸ್ವಾಗತಿಸಿದರು. ಡಾ. ಸಪನಾ ಜೋಶಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!