;Resize=(412,232))
ಬೆಂಗಳೂರು : ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಕೈದಿಗಳ ಭೇಟಿ ಸಂಬಂಧ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ 2021ರ ಅಧ್ಯಾಯ 31ರ ಅಡಿಯಲ್ಲಿ ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ಕೈದಿಗಳಿಗೆ ವಿಶೇಷ ಭೇಟಿಯ ಅವಕಾಶ ನೀಡಲು ಜೈಲು ಅಧೀಕ್ಷಕರಿಗೆ ಅಧಿಕಾರವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ನಿಯಮವನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಹೊಸ ಮಾರ್ಗಸೂಚಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಆದೇಶದ ಪಾಲನೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ವ್ಯಾಪ್ತಿಯ ಡಿಐಜಿಗಳು ಜವಾಬ್ದಾರರಾಗಿರುತ್ತಾರೆ ಎಂದು ಡಿಜಿಪಿ ಎಚ್ಚರಿಸಿದ್ದಾರೆ.
1. ಕೈದಿ ಗಂಭೀರ ಕಾಯಿಲೆ ಅಥವಾ ತೀವ್ರವಾಗಿ ಗಾಯಗೊಂಡು ಚಲನವಲನ ಸಾಧ್ಯವಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದರೆ ತಿಂಗಳಿಗೊಮ್ಮೆ ಮಾತ್ರ ವಿಶೇಷ ಭೇಟಿಗೆ ಅವಕಾಶ ನೀಡಬಹುದು.
2. ಕೈದಿಯ ಹತ್ತಿರದ ಕುಟುಂಬ ಸದಸ್ಯರು ಮರಣ ಹೊಂದಿದಾಗ ಅಥವಾ ಕುಟುಂಬದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದಾಗ ಮಾನವೀಯ ನೆಲೆಯಲ್ಲಿ ಭೇಟಿಗೆ ಅವಕಾಶ.
3.ಶಿಕ್ಷೆ ಮುಗಿದು ಅಥವಾ ಅವಧಿಗೆ ಮುನ್ನ ಬಿಡುಗಡೆಯಾಗುವ ಅರ್ಹತೆ ಹೊಂದಿರುವ ಕೈದಿಗಳಿಗೆ, ಅವರ ಬಿಡುಗಡೆಯ ಎರಡು ತಿಂಗಳ ಮೊದಲು ಭೇಟಿಗೆ ಅವಕಾಶ ನೀಡಬಹುದು.
4.ಇದು ಕೈದಿಯ ಪುನರ್ವಸತಿ, ಉದ್ಯೋಗ, ಆಪ್ತಸಮಾಲೋಚನೆ ಮತ್ತು ವಾಸಸ್ಥಳದ ಸಿದ್ಧತೆಗೆ ಮಾತ್ರ ಸೀಮಿತ. ಭೇಟಿ ಮಾಡಲು ಬರುವ ವಿಕಲಚೇತನರಾಗಿದ್ದರೆ ಅಥವಾ ಗರ್ಭಿಣಿ ಮಹಿಳೆಯಾಗಿದ್ದರೆ ಅಂತಹ ಸಂದರ್ಭಗಳಲ್ಲಿ ವಿಶೇಷ ಭೇಟಿಗೆ ಅವಕಾಶ ನೀಡಬಹುದು.
1.ಭೇಟಿಗೂ ಮುನ್ನ ಜೈಲು ಮುಖ್ಯಸ್ಥರಿಂದ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆಯಬೇಕು
2.ಭೇಟಿಯಿಂದ ಜೈಲಿನ ಭದ್ರತೆ ಅಥವಾ ಶಿಸ್ತಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
3.ಜೈಲಿನ ಆವರಣದೊಳಗಿರುವ ನಿಗದಿತ ಸಂದರ್ಶನ ಕೊಠಡಿಯಲ್ಲಿ ಭೇಟಿ. ಈ ಸಮಯದಲ್ಲಿ ಜೈಲು ಅಧಿಕಾರಿಯೊಬ್ಬರ ಮೇಲ್ವಿಚಾರಣೆ ಇರಲೇಬೇಕು. ಭೇಟಿಯ ಅವಧಿಯು ಯಾವುದೇ ಕಾರಣಕ್ಕೂ 30 ನಿಮಿಷಗಳನ್ನು ಮೀರಬಾರದು.
4.ಒಬ್ಬ ಕೈದಿಯನ್ನು ಭೇಟಿ ಮಾಡಲು ಗರಿಷ್ಠ 5 ಜನರಿಗೆ ಮಾತ್ರ ಅವಕಾಶವಿರುತ್ತದೆ. ಇದರಲ್ಲಿ ಕುಟುಂಬದವರು, ಸಂಬಂಧಿಕರು ಅಥವಾ ಸ್ನೇಹಿತರು ಸೇರಿರಬಹುದು.
5.ಭೇಟಿಯ ಸಮಯದಲ್ಲಿ ಯಾವುದೇ ಅಶಿಸ್ತು ಅಥವಾ ಭದ್ರತಾ ಲೋಪ ಕಂಡುಬಂದಲ್ಲಿ, ಭೇಟಿಯನ್ನು ತಕ್ಷಣವೇ ರದ್ದುಗೊಳಿಸುವ ಅಧಿಕಾರ ಜೈಲು ಮುಖ್ಯಸ್ಥರಿಗೆ ಇರುತ್ತದೆ. ಇದಕ್ಕೆ ಕಾರಣವನ್ನು ಅವರು ಲಿಖಿತವಾಗಿ ದಾಖಲಿಸಬೇಕು. ನೀಡಲಾದ ಪ್ರತಿಯೊಂದು ವಿಶೇಷ ಭೇಟಿಯ ಪ್ರಕರಣವನ್ನು ಉನ್ನತ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ
6.ಒಂದು ವೇಳೆ ಯಾವುದೇ ಭೇಟಿ ನಾಲ್ಕು ಸಂದರ್ಭಗಳಿಗೆ ಒಳಪಡದಿದ್ದರೆ ಮತ್ತು ಭೇಟಿ ಅತ್ಯಂತ ಅನಿವಾರ್ಯವೆಂದು ಕಂಡುಬಂದಲ್ಲಿ, ಅಂಥವರು ನೇರವಾಗಿ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಬೇಕು.
7. ಭೇಟಿ ನೀಡಲು ಉದ್ದೇಶಿಸಿರುವ ದಿನಾಂಕಕ್ಕಿಂತ ಕನಿಷ್ಠ 2 ಕೆಲಸದ ದಿನಗಳ ಮೊದಲೇ ಈ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.