ಖಾಸಗಿ ಕಾರ್ಯಕ್ರಮ ನಿರ್ಬಂಧ: ಸರ್ಕಾರಕ್ಕೆ ಹಿನ್ನಡೆ

KannadaprabhaNewsNetwork |  
Published : Nov 07, 2025, 02:15 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಜನರ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಏಕ ಸದಸ್ಯ ಪೀಠವು ತಡೆ ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ಧಾರವಾಡ ಪೀಠವು ವಜಾಗೊಳಿಸಿ ಗುರುವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಜನರ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಏಕ ಸದಸ್ಯ ಪೀಠವು ತಡೆ ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ಧಾರವಾಡ ಪೀಠವು ವಜಾಗೊಳಿಸಿ ಗುರುವಾರ ಆದೇಶಿಸಿದೆ.

ಆರ್‌ಎಸ್‌ಎಸ್‌ ಸೇರಿದಂತೆ ಇತರ ಸಂಘಟನೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅ.18ರಂದು ಹೊರಡಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಸೇರಿದಂತೆ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸಂವಿಧಾ‌ನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟು ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

ಬಳಿಕ ಏಕಸದಸ್ಯ ಪೀಠದ ಈ ಆದೇಶದ ವಿರುದ್ಧ ಸರ್ಕಾರವು ದ್ವಿಸದಸ್ಯ ಪೀಠ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಗೀತಾ ಕೆ.ಬಿ. ಅವರಿದ್ದ ಪೀಠವು ಸರ್ಕಾರ ಹಾಗೂ ಅರ್ಜಿದಾರರ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಗುರುವಾರ ಸರ್ಕಾರದ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಅಲ್ಲೆ ಮೆಮೊ ಸಲ್ಲಿಸಬಹುದಲ್ಲವೇ?:

ವಿಚಾರಣೆಯ ಒಂದು ಹಂತದಲ್ಲಿ ಪೀಠವು ‘ಮಧ್ಯಂತರ ಆದೇಶ ತೆರವು ಮಾಡುವಂತೆ ಕೋರಿ ಏಕ ಸದಸ್ಯ ಪೀಠದ ಮುಂದೆ ಮೆಮೊ ಸಲ್ಲಿಸಬಹುದಲ್ಲವೇ?’ ಎಂದು ಪ್ರಶ್ನಿಸಿತು. ಇದಕ್ಕೆ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ‘ಏಕಸದಸ್ಯ ಪೀಠವು ಮಧ್ಯಂತರ ಪರಿಹಾರ ನೀಡಬಹುದಿತ್ತು. ಆದರೆ, ತಡೆಯಾಜ್ಞೆ ನೀಡಿದೆ’ ಎಂದರು.

ಹಾರನಹಳ್ಳಿ ಆಕ್ಷೇಪ:

ರಿಟ್‌ನಲ್ಲಿ ಅರ್ಜಿದಾರರಾಗಿರುವ ಪುನಶ್ಚೇತನ ಸೇವಾ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ. ಅದಕ್ಕಾಗಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ