ಖಾಸಗಿ ಶಾಲೆಗಳ ಚೆಲ್ಲಾಟ: ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ

KannadaprabhaNewsNetwork | Published : May 11, 2025 11:52 PM
Follow Us

ಸಾರಾಂಶ

ಚಿಕ್ಕಮಗಳೂರು, ಶೇ. 100ರಷ್ಟು ಫಲಿತಾಂಶದ ಹಿಂದೆ ಬಿದ್ದಿರುವ ಅನುದಾನ ರಹಿತ ಕೆಲವು ಪ್ರೌಢಶಾಲೆಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿವೆ. ಈ ರೀತಿಯ ವಂಚನೆ, ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ನಿರಂತರವಾಗಿ ನಡೆಯುತ್ತಿವೆ. ಈ ವರ್ಷದಲ್ಲಿ ಇಂತಹದೊಂದು ಪ್ರಕರಣ ಬಯಲಿಗೆ ಬಂದಿರುವ ಮಾಹಿತಿ ಕನ್ನಡ ಪ್ರಭಕ್ಕೆ ಲಭ್ಯವಾಗಿದೆ.

ಶೇ. 100 ಫಲಿತಾಂಶ ತೋರಿಸಲು ಸಿಸಿಇಪಿಎಫ್‌ ಅಸ್ತ್ರ ಪ್ರಯೋಗ । ಪೋಷಕರೇ..., ಎಚ್ಚರ ತಪ್ಪಿದರೆ ಮಕ್ಕಳ ಭವಿಷ್ಯಕ್ಕೆ ಕುತ್ತು

ಆರ್‌.ತಾರಾನಾಥ್‌ ಆಟೋಕರ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶೇ. 100ರಷ್ಟು ಫಲಿತಾಂಶದ ಹಿಂದೆ ಬಿದ್ದಿರುವ ಅನುದಾನ ರಹಿತ ಕೆಲವು ಪ್ರೌಢಶಾಲೆಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿವೆ. ಈ ರೀತಿಯ ವಂಚನೆ, ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ನಿರಂತರವಾಗಿ ನಡೆಯುತ್ತಿವೆ. ಈ ವರ್ಷದಲ್ಲಿ ಇಂತಹದೊಂದು ಪ್ರಕರಣ ಬಯಲಿಗೆ ಬಂದಿರುವ ಮಾಹಿತಿ ಕನ್ನಡ ಪ್ರಭಕ್ಕೆ ಲಭ್ಯವಾಗಿದೆ.

ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗಳಿಗೆ ಹೋಗಿರುತ್ತಾರೆ. ಶಾಲೆಯಲ್ಲಿನ ಎಲ್ಲಾ ಪರೀಕ್ಷೆಯಲ್ಲೂ ಹಾಜರಾಗಿರುತ್ತಾರೆ. ಎಸ್‌ಎಸ್‌ಎಲ್‌ಸಿಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಹಾಜರಾಗಿರುತ್ತಾರೆ. ವಾರ್ಷಿಕ ಪರೀಕ್ಷೆಯಲ್ಲೂ ಹಾಜರಾಗುತ್ತಾರೆ. ಫಲಿತಾಂಶದಲ್ಲಿ ಸಂಬಂಧಿತ ಶಾಲೆಗಳ ಕಣ್ಣಾಮುಚ್ಚಲೆ ಆಟ ಬಯಲಿಗೆ ಬರುತ್ತಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹಲವು ಪೂರ್ವ ಯೋಜನೆಯನ್ನು ಸಿದ್ಧಪಡಿಸುತ್ತದೆ. ಅದನ್ನು ಕಾಲ ಕಾಲಕ್ಕೆ ಜಾರಿಗೆ ಬರುವಂತೆ ಮಾರ್ಗ ಸೂಚಿಯನ್ನು ಅನುಷ್ಟಾನಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಅನುದಾನ ರಹಿತ ಪ್ರೌಢಶಾಲೆಗಳು ತಮ್ಮಲ್ಲಿರುವ ಒಟ್ಟು ವಿದ್ಯಾರ್ಥಿಗಳ ಕಲಿಕೆಯನ್ನು ಆಗಾಗ ಮೌಲ್ಯ ಮಾಪನ ಮಾಡುತ್ತಾ ಬರುತ್ತವೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಖಾಸಗಿ ಹೊಸ ವಿದ್ಯಾರ್ಥಿಗಳು (ಸಿಸಿಇಪಿಎಫ್‌) ಎಂಬುದಾಗಿ ಪರೀಕ್ಷೆಯಲ್ಲಿ ಪರಿಗಣಿಸಲಾಗುತ್ತದೆ.

ಅಂತಹ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಿಂದ ಹೊರಗೆ ಉಳಿಯುತ್ತಾರೆ. ಇನ್ನುಳಿದ ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಶೇಕಡ ಇಂತಿಷ್ಟು ಫಲಿತಾಂಶ ಬಂದಿರುವುದಾಗಿ ಪ್ರಚಾರ ಮಾಡಿ ಪ್ರೌಢಶಾಲೆಗೆ ದಾಖಲಾಗಲು ಬರುವ ವಿದ್ಯಾರ್ಥಿಗಳ ಪೋಷಕರನ್ನು ವಂಚಿಸುತ್ತಿವೆ.

-- ಬಾಕ್ಸ್‌---ವಂಚನೆ: ಎಚ್ಚರಿಕೆನಿಮ್ಮ ಮಕ್ಕಳು ಪ್ರತಿದಿನ ಶಾಲೆಗೆ ಹೋಗ್ತಾ ಇದ್ದಾರಾ ?, ಎಸ್‌ಎಸ್‌ಎಲ್‌ಸಿಯಲ್ಲಿ ನಡೆಯುವ ಎಲ್ಲಾ ಪರೀಕ್ಷೆಯಲ್ಲೂ ಹಾಜರಾಗಿದ್ದಾರಾ ? ವಾರ್ಷಿಕ ಪರೀಕ್ಷೆ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು ಕಾಲಂ ಜತೆಗೆ ಇರುವ ಅಭ್ಯರ್ಥಿಗಳ ವಿಧದಲ್ಲಿ ಸಿಸಿಇಪಿಎಫ್‌ ಎಂಟ್ರಿ ಆಗಿದ್ದರೆ, ನಿಮ್ಮ ಮಗು ಖಾಸಗಿ ಹೊಸ ವಿದ್ಯಾರ್ಥಿ ಎಂಬು ದಾಗಿ ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದೆ ಎಂದರ್ಥ.

ಇದರಿಂದ ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕೆ ಕಂಟಕವಾಗಲಿದೆ. ಅಂದರೆ, ನಿಮ್ಮ ಮಗು ಪರೀಕ್ಷೆಯಲ್ಲಿ ತೆಗೆದು ಕೊಂಡಿ ರುವ ಅಂಕಗಳಷ್ಟೇ ಅಂಕ ಪಟ್ಟಿಯಲ್ಲಿ ದಾಖಲಾಗಿರುತ್ತದೆ. ಇಂಟರ್‌ನಲ್‌ ಮಾರ್ಕ್‌ ಸಿಗೋದಿಲ್ಲಾ, ಕಾರಣ, ಆತ ಖಾಸಗಿ ವಿದ್ಯಾರ್ಥಿಗಳೆಂದು ಪರಿಗಣಿಸುವುದರಿಂದ ಆಂತರಿಕ ಅಂಕ ಕೊಡಲು ಬರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗೆ ಸ್ವಸಾಮರ್ಥ್ಯ ಇದ್ದರೆ ಮಾತ್ರ ಪಾಸ್‌ ಆಗುತ್ತಾನೆ. ಇಲ್ಲದೆ ಹೋದರೆ ಅನುತ್ತೀರ್ಣ ಆಗುತ್ತಾನೆ. ಹಾಗಾಗಿ ಪರೀಕ್ಷೆಯ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

---ಖಾಸಗಿ ಹೊಸ ವಿದ್ಯಾರ್ಥಿಗಳು2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 12,857 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ 12, 257 ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳಾಗಿದ್ದರೆ, 170 ಶಾಲಾ ಪುನರಾವರ್ತಿತ ವಿದ್ಯಾರ್ಥಿಗಳು, 364 ಖಾಸಗಿ ಹೊಸ ವಿದ್ಯಾರ್ಥಿಗಳು, 66 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು. ಖಾಸಗಿ ಹೊಸ 364 ವಿದ್ಯಾರ್ಥಿಗಳ ಪೈಕಿ 8 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಇವರು ತಮ್ಮ ಸ್ವಸಾಮರ್ಥ್ಯದಿಂದ ತೇರ್ಗಡೆಯಾಗಿದ್ದಾರೆ. ಪೋಷಕರೇ ನಿಮ್ಮ ಮಕ್ಕಳು ಶಾಲೆಗೆ ಹೋಗಿ ಫೇಲಾಗಿದ್ದರೆ, ನಿಮ್ಮ ಮಕ್ಕಳ ಪರೀಕ್ಷೆ ಪ್ರವೇಶ ಪತ್ರ ಹಾಗೂ ಅಂಕಪಟ್ಟಿ ಪರಿಶೀಲಿಸಿ, ಪ್ರವೇಶಪತ್ರದಲ್ಲಿ ಅಭ್ಯರ್ಥಿಗಳ ವಿಧದಲ್ಲಿ ಸಿಸಿಇಪಿಎಫ್‌ ದಾಖಲಾಗಿದ್ದರೆ ಸಂಬಂಧಿತ ಶಾಲೆ ನಿಮ್ಮನ್ನು ವಂಚಿಸಿದೆ. ಮಗುವಿನ ಭವಿಷ್ಯಕ್ಕೆ ಕಲ್ಲು ಹಾಕಿದೆ ಎಂದರ್ಥ. ಕಾರಣ, ಈ ವರ್ಷದಲ್ಲಿ ಇಂತಹದೊಂದು ಪ್ರಕರಣ ಬಯಲಿಗೆ ಬಂದಿರುವ ಮಾಹಿತಿ ಕನ್ನಡ ಪ್ರಭಕ್ಕೆ ಸಿಕ್ಕಿದೆ.

--

ಸಿಸಿಇಪಿಎಫ್‌ ಅಭ್ಯರ್ಥಿ ಎಂಬುದಾಗಿ ಪರಿಗಣಿಸಿದ್ದರಿಂದ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಇಂಟರ್‌ನಲ್ ಮಾರ್ಕ್‌ ಕೈ ತಪ್ಪಿರುವುದು. 11 ಕೆಸಿಕೆಎಂ 2

---ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಸಿಸಿಇಪಿಎಫ್‌ ದಾಖಲಾಗಿರುವುದು. 11 ಕೆಸಿಕೆಎಂ 3