ರಾಹುಲ್​ ಜೊತೆ ಪ್ರಿಯಾಂಕ್‌ ಮಾತುಕತೆ

KannadaprabhaNewsNetwork |  
Published : Nov 26, 2025, 02:00 AM IST
ರಾಹುಲ್‌ ಗಾಂಧಿ | Kannada Prabha

ಸಾರಾಂಶ

ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ನಡುವೆಯೇ ಸಚಿವ ಪ್ರಿಯಾಂಕ್​ ಖರ್ಗೆಯವರು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ನಡುವೆಯೇ ಸಚಿವ ಪ್ರಿಯಾಂಕ್​ ಖರ್ಗೆಯವರು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ರಾಹುಲ್‌ ಅವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ ಪ್ರಿಯಾಂಕ್‌ ಖರ್ಗೆ, ಸೋಮವಾರ ರಾತ್ರಿ ದೆಹಲಿಯ ಸೋನಿಯಾ ನಿವಾಸದಲ್ಲಿ ರಾಹುಲ್‌ ಅವರನ್ನು ಭೇಟಿಯಾದರು. ಇಬ್ಬರು ನಾಯಕರ ನಡುವೆ ಸುಮಾರು ಒಂದೂವರೆ ತಾಸು ಮಾತುಕತೆ ನಡೆಯಿತು. ಇಬ್ಬರು ನಾಯಕರ ನಡುವೆ ಒನ್​-ಟು-ಒನ್​ ನಡೆದ ಸಭೆಯಲ್ಲಿ ರಾಹುಲ್‌ ಅವರು ಖರ್ಗೆಯವರಿಂದ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾಹಿತಿ ಪಡೆದರು.

ರಾಜ್ಯದ ಪ್ರಸಕ್ತ ರಾಜಕೀಯ ಗೊಂದಲಗಳು, ಸಿಎಂ-ಡಿಸಿಎಂ ನಡುವಿನ ಆಂತರಿಕ ಕಲಹ, ಆರ್‌ಎಸ್‌ಎಸ್ ನಿಷೇಧ ವಿಚಾರ, ಓಟ್‌ ಚೋರಿ ಕುರಿತ ಆರೋಪಗಳು ಸೇರಿದಂತೆ ಹಲವು ವಿಷಯಗಳು ಮಾತುಕತೆ ವೇಳೆ ಚರ್ಚೆಗೆ ಬಂದಿದ್ದವು. ಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಿಯಾಂಕ್ ಖರ್ಗೆಯವರ ಅಭಿಪ್ರಾಯವನ್ನೇ ಹೆಚ್ಚು ಆಲಿಸಿದರು. ಪ್ರಿಯಾಂಕ್ ಅವರು ರಾಹುಲ್ ಗೆ ರಾಜ್ಯದ ನಿಖರ ಚಿತ್ರಣ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾತುಕತೆ ವೇಳೆ ರಾಹುಲ್‌ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌, ಇಬ್ಬರ ಪಾಸಿಟಿವ್-ನೆಗೆಟಿವ್ ಅಂಶಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಆಗುವ ಪರಿಣಾಮಗಳೇನು? ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿದರೆ ಆಗುವ ಪರಿಣಾಮಗಳೇನು? ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಏನಾಗುತ್ತದೆ? ಡಿಕೆಶಿಯನ್ನು ಸಿಎಂ ಮಾಡಿದರೆ ಏನಾಗುತ್ತದೆ? ಎನ್ನುವುದರ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.ಈ ವೇಳೆ, ಪ್ರಿಯಾಂಕ್ ಖರ್ಗೆಯವರು, ಸಿದ್ದರಾಮಯ್ಯ ಅವರನ್ನು ಸೈಲೆಂಟ್ ಆಗಿ ಬಿಡುವುದು ಒಳ್ಳೆಯದಲ್ಲ. ಅವರನ್ನು ಪಕ್ಷ ಈಗಲೂ ಬಳಸಿಕೊಳ್ಳಬೇಕು. ಅದಕ್ಕೆ ಪರ್ಯಾಯ ಯೋಜನೆ ಏನು ಎಂಬುದನ್ನು ಯೋಚಿಸಬೇಕು. ಪಕ್ಷದ ಕಾರ್ಯಕರ್ತರ ಮನೋಭಾವ ಮತ್ತು ಜನಾಭಿಪ್ರಾಯ ಎರಡನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಒತ್ತಾಯವನ್ನು ರಾಹುಲ್ ಮುಂದಿಟ್ಟಿದ್ದಾರೆ. ಬಳಿಕ, ರಾಹುಲ್ ಗಾಂಧಿಯವರ ಆಪ್ತ ಶ್ರೀವತ್ಸ ಅವರೊಂದಿಗೂ ಪ್ರಿಯಾಂಕ್ ಖರ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಕಲಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯದ ಎಲ್ಲಾ ಬಣಗಳ ಅಭಿಪ್ರಾಯ ತಿಳಿದುಕೊಳ್ಳುವ ಉದ್ದೇಶದಿಂದಲೇ ರಾಹುಲ್ ಅವರು ಪ್ರಿಯಾಂಕ್ ಖರ್ಗೆಯನ್ನು ಕರೆಸಿಕೊಂಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ