ಗೋಕರ್ಣ: ಶಾಲಾ ಕಾಲೇಜು ಹಂತದಲ್ಲಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ತಡೆಗೆ ಜಾಗೃತಿ ಮೂಡಿಸಲು ಶಿಕ್ಷಕರ ಜವಾಬ್ಧಾರಿ ಜೊತೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸ ಬೇಕು ಈ ಕಾರ್ಯಕ್ಕೆ ನಾನು ಜೊತೆಯಾಗುತ್ತೇನೆ ಇದು ಪ್ರವಾಸಿ ತಾಣ ಗೋಕರ್ಣದಿಂದಲೇ ಪ್ರಾರಂಭವಾಗಲಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಭದ್ರಕಾಳಿ ಕಾಲೇಜಿನ ಸಭಾ ಭವನದಲ್ಲಿ ಶುಕ್ರವಾರ ನಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಗೋಕರ್ಣ ಪೊಲೀಸ್ ಠಾಣೆವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯಗಳ ವಿರುದ್ದ ಜಾಗೃತಿ ಅಭಿಯಾನದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿಗೆ ಮಾದಕ ವಸ್ತುಗಳ ಬಳಕೆ ಯುವಜನರಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಇದನ್ನ ತಡೆಯಲು ಎಲ್ಲರೂ ಒಂದಾಗ ಬೇಕು ಎಂದ ಅವರು, ಮೊಬೈಲ ಬಳಕೆಯೂ ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿದ್ದು, ಮಾದಕ ವಸ್ತು, ಮೊಬೈಲ್ ಬಳಕೆ ಎರಡು ನಿಷೇಧವಾಗಬೇಕು ಎಂದರು.
ವಿದ್ಯಾ ಸಂಸ್ಥೆಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.ನಿವೃತ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ ರಾವ್ ಮಾತನಾಡಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ಪರಿಣಾಮಗಳನ್ನ ವಿವರಿಸಿ, ಪ್ರವಾಸಿತಾಣದಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳನ್ನ ವಿವರಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಮಾತನಾಡಿ ಮಾದಕ ಪದಾರ್ಧದ ವ್ಯಸನಿಯನ್ನ ಪತ್ತೆ ಹಚ್ಚುವ ಕ್ರಮ ತಿಳುವಳಿಕೆ ಮೂಲಕ ಮನಪರಿವರ್ತನೆ ಮಾಡುವುದು ಹಾಗೂ ಮಾದಕ ವಸ್ತುಗಳ ವಹಿವಾಟಿನ ಪ್ರಕರಣದಲ್ಲಿ ದಂಧೆಕೋರರು ತಪ್ಪಿಸಿಕೊಳ್ಳುತ್ತಿರುವದನ್ನ ವಿವರಿಸಿದರು.ಡಿ.ವೈ.ಎಸ.ಪಿ. ಮಹೇಶ ಎಂ. ಕೆ. ಮಾತನಾಡಿ ಪ್ರವಾಸಿ ತಾಣದಲ್ಲಿ ಈಗಾಗಲೇ ೨೦ಕ್ಕೂ ಹೆಚ್ಚು ಮಾದಕ ವಸ್ತುಗಳ ಬಳಕೆಯ ಕುರಿತು ಪ್ರಕರಣಗಳನ್ನ ದಾಖಲಿಸಿ ಕ್ರಮತೆಗೆದುಕೊಂಡಿರುವುದನ್ನ ವಿವರಿಸಿ,ಇಂತಹ ಚಟುವಟಿಕೆಯನ್ನ ನಿಯಂತ್ರಿಸಲಾಗುತ್ತಿದೆ ಎಂದರು. ಅಲ್ಲದೇ ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ತಿಳಿಸಿ ವಿದ್ಯಾರ್ಥಿ ಜೀವನದಿಂಲೇ ಈ ಬಗ್ಗೆ ಜಾಗೃತವಹಿಸ ಬೇಕು ಎಂದರು.
ಪಿ.ಐ. ಶ್ರೀಧರ ಎಸ್.ಆರ್, ಪ್ರಸ್ತಾವಿಕವಾಗಿ ಮಾತನಾಡಿ, ನಾಳಿನ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಿ, ಇದರೊಟ್ಟಿಗೆ ಪಾಲಕರಿಗೂ ತಿಳುವಳಿಕೆ ನೀಡುವಂತಹ ಉದ್ದೇಶದಿಂದ ಮುಕ್ತ ಆನ್ ಲೈನ್ ಚಿತ್ರಕಲೆ ಸ್ಪರ್ಧೆ ನಡೆಸಿದ್ದು ಅಭೂತಪೂರ್ವ ಸ್ಪಂದನೆ ದೊರಕಿದೆ ಎಂದು ಸಹಕರಿಸಿದ ಸರ್ವರರನ್ನ ಅಭಿನಂದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಕಾರ್ಯದರ್ಶಿ ಜಿ.ಎನ್. ನಾಯಕ ಮಾತನಾಡಿ ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನ ವಿವರಿಸಿದರು.
ಆಡಳಿತ ಮಂಡಳಿಯ ಸದಸ್ಯ ಗುರುಪ್ರಕಾಶ ಹೆಗಡೆ ಮಾತನಾಡಿದರು.ವೇದಿಕೆಯಲ್ಲಿ ಗ್ರಾ. ಪಂ. ಅಧ್ಯಕ್ಷೆ ಸುಮನಾ ಗೌಡ, ಕಾಲೇಜಿನ ಪ್ರಾಚಾರ್ಯ ಎಸ.ಸಿ.ನಾಯ್ಕ, ಪೌಢಶಾಲಾ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ, ಪಿ.ಎಸ್.ಐ. ಖಾದರ್ ಬಾಷಾ. ಶಶಿಧರ ಮಹಾಬಲೇಶ್ವರ ಕೋ-ಆಫ್ ರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಜಿ.ಪಂ. ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ,ತಾ. ಪಂ. ಮಾಜಿ ಸದಸ್ಯ ಮಹೇಶ ಶೆಟ್ಟಿ, ನಾಡುಮಾಸ್ಕೇರಿ ಗ್ರಾ. ಪಂ. ಮಾಜಿ ಅಧ್ಯಕ್ಷ ಹನೀಫ್ ಸಾಬ್ ಮತ್ತಿತತರು ಉಪಸ್ಥಿತರಿದ್ದರು. ಉಪನ್ಯಾಸಕಿ ಪಲ್ಲವಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು.
ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆಗೆ ಮೊದಲ ಸ್ಥಾನ ನೀಡಿ ಟ್ರೋಪಿ ನೀಡಲಾಯಿತು. ನಂತರ ಆನಂದಾಶ್ರಮ ಪ್ರೌಢಶಾಲೆ, ಮೂರನೇ ಸ್ಥಾನ ಹೊಸ್ಕೇರಿ ಸರ್ಕಾರಿ ಶಾಲೆ ಪಡೆದುಕೊಂಡಿತ್ತು. ನಂತರ ವಿವಿಧ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಹಾಗೂ ಉಳಿದವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಗೋಕರ್ಣ ಪೊಲೀಸ ಠಾಣೆ ಎಲ್ಲಾ ಸಿಬ್ಬಂದಿಗಳು, ಭದ್ರಕಾಳಿ ಕಾಲೇಜಿನ ಶಿಕ್ಷಕ , ಉಪನ್ಯಾಸ ವೃಂದವರು ಮತ್ತಿತರರು ಸಹಕರಿಸಿದರು. ವಿದ್ಯಾರ್ಥಿಗಳು ಪಾಲಕರು ಊರನಾಗರಿಕರು ಪಾಲ್ಗೊಂಡಿದ್ದರು.