ಕನ್ನಡಪ್ರಭ ವಾರ್ತೆ ಪಾಂಡವಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಿಎಂ ಕುಸುಮ್ ಯೋಜನೆಯಿಂದ 4.5 ಮೆಗಾವ್ಯಾಟ್ ಸೋಲಾರ್ ಪ್ಲಾಟ್ ನಿರ್ಮಾಣ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ಗುರುತಿಸಲ್ಪಟ್ಟ ಗೋಮಾಳದ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಸ್ಥಳೀಯ ಎರಡು ಗುಂಪುಗಳು ಪವರ್ ಪ್ಲಾಂಟ್ ಪರ-ವಿರೋಧ ವ್ಯಕ್ತಪಡಿಸಿದರು.
ಯೋಜನೆಗೆ ಗುರುತಿಸಿರುವ ಸ್ಥಳ ಗೋಮಾಳ ಪ್ರದೇಶ. ಇದನ್ನು ಗೋಮಾಳವಾಗಿಯೇ ಉಳಿಸಿ ಎಂದು ಗ್ರಾಮಸ್ಥರು ಚಿನಕುರಳಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಜಾಗವನ್ನು ಗೋಮಾಳವಾಗಿಯೇ ಉಳಿಸಿ ಎಂದು ಡಿಸಿ, ಎಸಿ ಹಾಗೂ ತಹಸೀಲ್ದಾರ್‌ಗೆ ಗ್ರಾಪಂನಿಂದ ಮನವಿ ಸಲ್ಲಿಸಲಾಗಿದೆ ಎಂದರು.ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಂದ ನಮಗೆ ಸ್ಪಷ್ಟ ಆದೇಶ ಬಂದಿಲ್ಲ. ಜಾನುವಾರಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಮೀಸಲಿರಿಸಬೇಕೆಂದು ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಇದ್ದರೂ ಸಹ ತಾಲೂಕು ಆಡಳಿತ ಗ್ರಾಮಸ್ಥರ ಗಮನಕ್ಕೆ ತಾರದೆ, ಪ್ರಕಟಣೆ ಹೊರಡಿಸಿ 18 ಎಕರೆ ಗೋಮಾಳ ಪ್ರದೇಶವನ್ನು ಖಾಸಗಿ ವ್ಯಕ್ತಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದಾರೆ. ಸ್ಥಳೀಯ ಗ್ರಾಪಂ ಆಡಳಿತಕ್ಕೂ ಗಮನಕ್ಕೂ ತರದೆ ಕಾರ್ಯಕ್ರಮಕ್ಕೂ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಿ ತರಾತುರಿಯಲ್ಲಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆ ಕೇಂದ್ರ ಸರ್ಕಾರದ ಸಹಕಾರ ಇರುವುದರಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕೆ ಆಗಮಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಿ ನಂತರ ಜಿಲ್ಲಾಧಿಕಾರಿಗಳು ಇದೇ ಜಾಗ ಸೂಕ್ತವೆಂದು ತಿಳಿಸಿದರೆ ಭೂಮಿ ಪೂಜೆ ನೆರವೇರಿಸಿ ಅಲ್ಲಿಯವರೆಗೆ ಮಾಡಬಾರದು ಎಂದು ಆಗ್ರಹಿಸಿದರು.
ಆದರೆ, ಶಾಸಕರ ಪರವಾದ ಇನ್ನೊಂದು ಗುಂಪು ಯಾವುದೇ ಕಾರಣಕ್ಕೂ ಭೂಮಿ ಪೂಜೆ ಮುಂದೂಡಬಾರದು ನೀವು ಭೂಮಿಪೂಜೆ ಮಾಡದೆ ಇಲ್ಲಿಂದ ತೆರಳಿದರೆ ನಾವು ನಿಮ್ಮನ್ನು ಬಿಡೋದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಎರಡು ಗುಂಪುಗಳ ನಡುವೆ ಸಾಕಷ್ಟು ಚರ್ಚೆ, ವಾಗ್ದಾದ ನಡೆದು ತಳ್ಳಾಟ, ನೂಕಾಟ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಿದರು.
ಮತ್ತೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸೋಣ ಅಲ್ಲಿಯವರೆಗೆ ಕಾಮಗಾರಿ ಆರಂಭಿಸಲ್ಲ. ಸದ್ಯಕ್ಕೆ ಭೂಮಿ ಪೂಜೆ ಮಾಡುತ್ತೇವೆ, ಚರ್ಚಿಸಿ ತೀರ್ಮಾನಿಸಿದ ಬಳಿಕ ಕಾಮಗಾರಿ ಆರಂಭವಿಸುತ್ತೇವೆ ಎಂದರು. ಈ ವೇಳೆ ಸಾಕಷ್ಟು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಶಾಸಕರು ಯಾವ ವಿರೋಧಕ್ಕೂ ಲೆಕ್ಕಿಸದೆ ಪೊಲೀಸರ ರಕ್ಷಣೆಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಸರ್ಕಾರ ಹಾಗೂ ಹೈಕೋರ್ಟ್ ಆದೇಶವಿದ್ದರೂ ತಾಲೂಕು ಆಡಳಿತ ಶಾಸಕರು, ಜಿಲ್ಲಾಡಳಿಕ್ಕೆ ತಪ್ಪು ಮಾಹಿತಿ ರವಾನಿಸಿದೆ. ಭೂಮಿ ಪೂಜೆಗೆ ಸ್ಥಳೀಯ ಗ್ರಾಪಂ ಅಧ್ಯಕ್ಷೆ, ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ದಲಿತ ಮಹಿಳೆ ಎಂಬ ಕಾರಣಕ್ಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟ ಹಿಡಿದು ಸ್ಥಳೀಯರು ಪ್ರತಿಭಟನೆ ನಡೆಸಿದರು.
- ದರ್ಶನ್ ಪುಟ್ಟಣ್ಣಯ್ಯ, ಶಾಸಕರು