ಕನಕಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ತ್ರಿವೇಣಿ ಸಂಗಮದ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಿದ್ದು, ಅನುಮೋದನೆ ದೊರೆತ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಶನಿವಾರ ಕಸಾಪದಿಂದ ನಡೆದ ಕನಕಗಿರಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುಷ್ಪ, ಜಯಂತಿ, ಗೋಪಿಕಾ ನದಿಗಳು ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಕೂಡಿ ಹರಿಯುವುದರಿಂದ ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತಿದ್ದು, ಇದರ ಅಭಿವೃದ್ಧಿ ಮಾಡಬೇಕೆನ್ನುವ ಮಹದಾಸೆ ಹೊಂದಿದ್ದು, ಕ್ರಿಯಾ ಯೋಜನೆ ರೂಪಿಸಲಾಗಿದೆ. ಹೆಚ್ಚು ಕಡಿಮೆ ₹42 ಕೋಟಿ ಅಂದಾಜು ವೆಚ್ಚ ಆಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾಮಗಾರಿಗೆ ಅನುಮೋದನೆ ದೊರೆತ ಮೇಲೆ ಭೂಮಿಪೂಜೆ ಮಾಡುವುದಾಗಿ ತಿಳಿಸಿದರು.ಇನ್ನೂ ದರೋಜಿ ಬಾಗಲಕೋಟೆ ರೈಲ್ವೆ ಮಾರ್ಗದ ಯೋಜನೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯೋಜನೆ ಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಯೊಬ್ಬರು ಕನ್ನಡ ಉಳಿವಿಗಾಗಿ ಶ್ರಮಿಸಬೇಕಿದೆ. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ಕನ್ನಡ ಉಳಿಯಬೇಕಾದರೆ ತಾಯಂದಿರು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು. ಮನೆಯಲ್ಲಿ ಸ್ಪಷ್ಟ ಕನ್ನಡ ಮಾತನಾಡುವುದನ್ನು ಕಲಿಸಬೇಕು ಎಂದು ತಿಳಿಸಿದರು.
ಸರ್ವಾಧ್ಯಕ್ಷರಾದ ವೆಂಕಟೇಶ್ ಜನಾದ್ರಿ, ಡಾ. ಎಸ್.ವಿ. ಡಾಣಿ, ಹನುಮೇಶ್ ನಾಯಕ್, ರೆಡ್ಡಿ ಶ್ರೀನಿವಾಸ, ಸಣ್ಣ ಕನಕಪ್ಪ ಚಲುವಾದಿ ಇತರರಿದ್ದರು.