ಬೀದರ್ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇಷ್ಟು ಬೆಳೆಸಿದ್ದು ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರಾಗಿದ್ದು ಅವರನ್ನು ಸ್ಮರಣೆ ಮಾಡಲೇಬೇಕು ಎಂದು ಬೆಲ್ದಾಳೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಸರ್ಕಾರ ಹಾಗೂ ಸಹಕಾರ ಒಂದಕ್ಕೊಂದು ಬಾಂಧವ್ಯ ಹೊಂದಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಝೀರಾ ಕನ್ವೆಷನ್ ಹಾಲ್‌ನಲ್ಲಿ ಬುಧವಾರ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರದಲ್ಲಿ ಸಹಕಾರದಿಂದಲೇ ಲಾಭವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇಷ್ಟು ಬೆಳೆಸಿದ್ದು ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರಾಗಿದ್ದು ಅವರನ್ನು ಸ್ಮರಣೆ ಮಾಡಲೇಬೇಕು ಎಂದರು.
ಅಲ್ಲದೇ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಬಿಎಸ್‌ಎಸ್‌ಕೆ ಬೆಳೆಸಿದರು. ಅಲ್ಲದೇ ರಾಜ್ಯ ಮಟ್ಟದ ಮಹಿಳಾ ಸಹಕಾರ ಒಕ್ಕೂಟ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ಹೀಗೆ ಅನೇಕರ ಪಾತ್ರ ಸಹಕಾರ ಕ್ಷೇತ್ರದ ಬೆಳವಣಿಗೆ ಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ಅವಕಾಶಗಳಿವೆ. ರಾಜ್ಯದಲ್ಲಿ 1 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದ್ದು, ಉದ್ಯೋಗ ಎಂದರೆ ಪುಣ್ಯದ ಕೆಲಸವಾಗಿದೆ ಎಂದರು.
ಸಹಕಾರ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಕೆಲಸ ಆಗಬಾರದು :
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರಾದ ಜಿ.ನಂಜನಗೌಡ ಮಾತನಾಡಿ, ಸಹಕಾರ ಕ್ಷೇತ್ರ ಎಂಬುವದು ಯಾವುದೇ ಭೇದಭಾವ ಇಲ್ಲದೆ ಎಲ್ಲ ಜನಾಂಗದ ಜನರು ಕೂಡಿ ಬಾಳುವ ಕ್ಷೇತ್ರವಾಗಿದೆ ಆದರೆ, ಇತ್ತೀಚಿನ ದಿನಗಳಲ್ಲಿ ಜನರ ನಂಬಿಕೆ ಕೆಳೆದುಕೊಳ್ಳುತ್ತಿದ್ದು ಕೆಲವರಿಂದ ಸಹಕಾರ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಇಡೀ ವ್ಯವಸ್ಥೆಗೆ ಧಕ್ಕೆ ತರುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಸಹಕಾರಿಗೆ ಧಕ್ಕೆಯಾದರೆ ಇಡಿ ಸಹಕಾರಿಗಳಿಗೆ ಕೆಟ್ಟ ಹೆಸರು ಬರುತ್ತದೆ ಆದ್ದರಿಂದಲೇ ಸಹಕಾರಿ ಕಾಯ್ದೆಯಲ್ಲಿ ಸಂಶೋಧನೆ ಮಾಡಿ ಅದಕ್ಕೆ ಮೂಗುದಾರ ಹಾಕಲು ಬದಲಾವಣೆ ಅನಿವಾರ್ಯವಾಗಿದ್ದು, ಸಿಬ್ಬಂದಿ ಜವಾಬ್ದಾರಿ ಯುತ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಗುರುನಾಥ ಜ್ಯಾಂತಿ ಕರ್ ಪ್ರಾಸ್ತಾವಿಕ ಮಾತನಾಡಿ, ಸಹಕಾರ ಕ್ಷೇತ್ರದಿಂದಲೇ ಎಲ್ಲ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಿದೆ. ಹೀಗಾಗಿ ಸಹಕಾರ ಎಂಬುವುದರಲ್ಲಿ ಎಲ್ಲವೂ ಅಡಗಿದೆ ಎಂದರು.
2021ರಲ್ಲಿ ಕೇಂದ್ರದಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾಗಿದೆ. ಸಹಕಾರ ನೀತಿ, ಸಹಕಾರ ವಿಶ್ವ ವಿದ್ಯಾಲಯ ರಚನೆಯಾಗಿದೆ. ಸುಮಾರು 1 ಕೋಟಿ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಈ ಹಿಂದೆ ಪ್ರತಿ ಲೀಟರ್ 2 ರು. ಹೆಚ್ಚಳ ಮಾಡಲಾಗಿತ್ತು ಈಗ ಪ್ರತಿ ಲೀಟರ್ 8 ರು. ಹೆಚ್ಚಳ ಮಾಡಲಾಗಿದೆ. ದೇಶದಲ್ಲಿಯೇ ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದಿಸಲಾಗುತ್ತದೆ ಎಂದರು.
ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಿದರು. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಎನ್‌ಎಸ್ ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ, ಕರ್ನಾಟ ರಾಜ್ಯ ಮಹಿಳಾ ಮಹಾಮಂಡಳ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾದ ಅಭಿಷೇಕ ಆರ್ ಪಾಟೀಲ್, ಜೆ.ಶಿವಪ್ರಸಾದ್, ಎಚ್.ಜೆ.ಹನುಮಂತಯ್ಯ, ಸಂಜೀವ ಮಹಾಜನ್, ಜಿ.ಶ್ರೀಧರ, ಶರಣಗೌಡ ಜಿ. ಪಾಟೀಲ್, ಎಚ್‌ಪಿ. ಕುಮಾರ, ಎನ್, ಬಸಣ್ಣ ರಾಠೋಡ, ಸವಿತಾ ಬಸನಾಳ, ಸಂಜಯ ಕೋರಬರಕರ, ಸುಕರಾಜ, ಅಮೃತ ಹೊಸಮನಿ, ಎಚ್‌ಆರ್ ಮಲ್ಲಮ್ಮ ಸೇರಿದಂತೆ ಇನ್ನಿತರರು ಇದ್ದರು.
ಸಹಕಾರ ಸಂಘಗಳ ಉಪ ನಿಬಂಧಕರಾದ ಮಂಜುಳಾ ಎಸ್. ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉತ್ತಮ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳಿಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.