ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಸಮಾನ ಅವಕಾಶ ಇಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಮಹಿಳಾ ನಾಯಕತ್ವ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಒದಗಿಸುವ ಜತೆಗೆ ಆಡಳಿತದಲ್ಲಿ ಮಾನವೀಯತೆ, ಸಂವೇದನೆ ಹೆಚ್ಚಿಸುತ್ತದೆ ಎಂದು ರಾಜ್ಯಪಾಲರಾದ ಡಾ.ಸುಧಾ ಯಾದವ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಸಮಾನ ಅವಕಾಶ ಇಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಮಹಿಳಾ ನಾಯಕತ್ವ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಒದಗಿಸುವ ಜತೆಗೆ ಆಡಳಿತದಲ್ಲಿ ಮಾನವೀಯತೆ, ಸಂವೇದನೆ ಹೆಚ್ಚಿಸುತ್ತದೆ ಎಂದು ರಾಜ್ಯಪಾಲರಾದ ಡಾ.ಸುಧಾ ಯಾದವ್‌ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಭಾರತ ಪ್ರಾದೇಶಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಮ್ಮೇಳನ ಹಾಗೂ ಅದರ ಉದ್ದೇಶಗಳ ಬಗ್ಗೆ ಗುಣಗಾನ ಮಾಡಿದ ಅವರು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಮಹಿಳಾ ಜನಪ್ರತಿನಿಧಿಗಳನ್ನು ಸೈಬರ್ ಕಿರುಕುಳ, ಆನ್‌ಲೈನ್‌ ಬೆದರಿಕೆ, ಡೀಫ್‌ಫೇಕ್‌ ಮತ್ತು ಡಿಜಿಟಲ್ ದುರುಪಯೋಗದಿಂದ ರಕ್ಷಿಸುವುದು ಮಹತ್ವದ ಆದ್ಯತೆಯಾಗಿದೆ. ಮಹಿಳೆಯರು ನಿರ್ಭಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವ ಸುರಕ್ಷಿತ, ಎಲ್ಲರನ್ನೂ ಒಳಗೊಳ್ಳುವ, ಗೌರವಯುತ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಡಿಜಿಟಲ್ ಪರಿಸರವನ್ನು ನಿರ್ಮಿಸಬೇಕು ಎಂದರು.

ಟೆಕ್‌ ಭಯ ಹುಟ್ಟಿಸುವ ಮಾಧ್ಯಮ ಆಗಬಾರದು:

ಡಿಜಿಟಲ್ ಸಾಕ್ಷರತೆ, ಸೈಬರ್ ಕಾನೂನುಗಳ ಅರಿವು, ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆ ಬಲಪಡಿಸುವುದು ಅಗತ್ಯವಾಗಿದೆ. ತಂತ್ರಜ್ಞಾನ ಮಹಿಳೆಯರ ಸಬಲೀಕರಣದ ಸಾಧನವಾಗಬೇಕು, ಅವರ ಧ್ವನಿಯನ್ನು ಕುಗ್ಗಿಸುವ ಅಥವಾ ಭಯ ಹುಟ್ಟಿಸುವ ಮಾಧ್ಯಮವಾಗಬಾರದು ಎಂದು ಸುಧಾ ಹೇಳಿದರು.

12ನೇ ಶತಮಾನದಲ್ಲಿ ಜಗದ್ಗುರು ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವು ಮುಕ್ತ ಚರ್ಚೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವ ಸಾರಿದ ವಿಶಿಷ್ಟ ಪ್ರಜಾಪ್ರಭುತ್ವ ವೇದಿಕೆಯಾಗಿತ್ತು. ಅಲ್ಲಿ ಅಕ್ಕ ಮಹಾದೇವಿಯಂತಹ ದಾರ್ಶನಿಕರು ತಮ್ಮ ವಿಚಾರಗಳನ್ನು ನಿರ್ಭಯವಾಗಿ ಮಂಡಿಸಿ, ಸಮಾಜ, ಧರ್ಮ ಮತ್ತು ಆಡಳಿತದ ಕುರಿತು ಚರ್ಚೆ ನಡೆಸಿದರು. ಅಕ್ಕಮಹಾದೇವಿಯ ವಚನದ ಆಶಯ ಉಲ್ಲೇಖಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಪ್ರಶಂಸೆ ಮತ್ತು ಟೀಕೆ ಎರಡೂ ಸಹಜ. ಅವುಗಳಿಗೆ ಹೆದರದೆ, ಶಾಂತಚಿತ್ತ ಮತ್ತು ದೃಢಸಂಕಲ್ಪದಿಂದ ನಮ್ಮ ಗುರಿಯತ್ತ ಸಾಗಬೇಕು ಎಂಬ ಸಂದೇಶ ಮಹಿಳಾ ಜನಪ್ರತಿನಿಧಿಗಳಿಗೆ ಅತ್ಯಂತ ಪ್ರಸ್ತುತ ಎಂದು ಅವರು ಹೇಳಿದರು.

-ಬಾಕ್ಸ್-

ಡೀಪ್‌ ಫೇಕ್‌, ಸೈಬರ್‌ ಕಿರುಕುಳ

ತಪ್ಪಿಸಲು ಎಐ ಬಳಕೆ ಬಗ್ಗೆ ಚರ್ಚೆ

ಸಮ್ಮೇಳನದಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಸೈಬರ್‌ ಸುರಕ್ಷತೆ ಹಾಗೂ ಋತುಬಂಧ ಕುರಿತು ಜಾಗೃತಿ ಒದಗಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು. ಮಹಿಳೆಯರ ವಿರುದ್ಧ ನಡೆಯುತ್ತಿರುವ ಸೈಬರ್ ಕಿರುಕುಳ, ಡೀಪ್‌ಫೇಕ್, ಮಾರ್ಫಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ವಿಷಯಗಳ ಪ್ರಸಾರ ತಡೆಯಲು ಎಐ ಆಧಾರಿತ ತಂತ್ರಜ್ಞಾನ ಬಳಸುವ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಿತು. ಈ ವಿಚಾರವನ್ನು ಕೇಂದ್ರ ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಸಿಡಬ್ಲ್ಯೂಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಪುರಂದೇಶ್ವರಿ ಹೇಳಿದರು.

ಕಳೆದ ಎರಡು ದಿನಗಳಿಂದ ಮಹಿಳಾ ನಾಯಕತ್ವಕ್ಕೆ ಬಲವಾದ ಅಡಿಪಾಯ ನಿರ್ಮಿಸುವುದು, ಅವರ ಧ್ವನಿ ಪರಿಣಾಮಕಾರಿಯಾಗಿಸುವುದು. ಸುರಕ್ಷಿತ ಡಿಜಿಟಲ್ ವಾತಾವರಣ ರೂಪಿಸುವುದು ಸೇರಿ ಹಲವು ಚರ್ಚೆಗಳು ನಡೆದಿವೆ. ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರ ಮಾನಸಿಕ ಆರೋಗ್ಯ, ಕೆಲಸ ಮತ್ತು ಜೀವನದ ಸಮತೋಲನ, ಕಿರುಕುಳ ಮುಕ್ತ ಸಂಸದೀಯ ವಾತಾವರಣ ಹಾಗೂ ಅವರ ಸುರಕ್ಷತೆಗೆ ಸಂಬಂಧಿಸಿದ ಸಿಡಬ್ಲ್ಯುಪಿ ಉಪಕ್ರಮಗಳು ಕಾಮನ್ವೆಲ್ತ್ ರಾಷ್ಟ್ರಗಳಿಗೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಸಭೆ ಉಪಸಭಾಪತಿ ಡಾ.ಹರಿವಂಶ್, ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್, ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ್, ಪರಿಷತ್ತಿನ ಉಪಸಭಾಪತಿ ಡಾ. ಉಮಾಶ್ರೀ, ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಾ.ಡಿ.ಪುರಂದೇಶ್ವರಿ ಹಾಜರಿದ್ದರು.