ನವೋದ್ಯಮಗಳಿಗೆ ಉತ್ತೇಜನ ನೀಡುವ ಹಾಗೂ ತಂತ್ರಜ್ಞಾನ ಬಳಕೆ ಮಾಡಿ ಸರ್ಕಾರದ ಇಲಾಖೆಗಳಿಂದ ಉತ್ತಮ ಸೇವೆ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ಸರ್ಕಾರವೇ ಮೊದಲ ಗ್ರಾಹಕ’ ಉಪಕ್ರಮದ ಅಡಿ ಪ್ರಜಾಸೇವೆ ಇಲಾಖೆ ಮತ್ತು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಜತೆ ಕೆಲಸ ಮಾಡಲು ಎಂಟು ನವೋದ್ಯಮಗಳಿಗೆ ಬುಧವಾರ ಕಾರ್ಯಾದೇಶ ಪತ್ರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನವೋದ್ಯಮಗಳಿಗೆ ಉತ್ತೇಜನ ನೀಡುವ ಹಾಗೂ ತಂತ್ರಜ್ಞಾನ ಬಳಕೆ ಮಾಡಿ ಸರ್ಕಾರದ ಇಲಾಖೆಗಳಿಂದ ಉತ್ತಮ ಸೇವೆ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ಸರ್ಕಾರವೇ ಮೊದಲ ಗ್ರಾಹಕ’ ಉಪಕ್ರಮದ ಅಡಿ ಪ್ರಜಾಸೇವೆ ಇಲಾಖೆ ಮತ್ತು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಜತೆ ಕೆಲಸ ಮಾಡಲು ಎಂಟು ನವೋದ್ಯಮಗಳಿಗೆ ಬುಧವಾರ ಕಾರ್ಯಾದೇಶ ಪತ್ರ ನೀಡಲಾಯಿತು.

ಬೆಂಗಳೂರು ಟೆಕ್‌ ಶೃಂಗದಲ್ಲಿ ಬುಧವಾರ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ನವೋದ್ಯಮ ಕಂಪೆನಿಗಳಿಗೆ ಕಾರ್ಯಾದೇಶ ಪತ್ರ ನೀಡಿದರು. ಈ ಎಂಟೂ ಕಂಪನಿಗಳಲ್ಲಿ ತಲಾ ನಾಲ್ಕು ನವೋದ್ಯಮಗಳು ಪ್ರಜಾಸೇವೆ ಇಲಾಖೆ ಮತ್ತು ಬೆಂಗಳೂರು ಜಲಮಂಡಳಿಯ ಸೇವೆಯ ಗುಣಮಟ್ಟ ಸುಧಾರಿಸುವ ಕೆಲಸ ಮಾಡಲಿವೆ.

ಆಯ್ಕೆಯಾಗಿರುವ ನವೋದ್ಯಮಗಳು ಡಿಜಿಟಲ್ ಆಡಳಿತ, ನಗರ ಮೂಲಸೌಕರ್ಯ, ಕಾರ್ಯನಿರ್ವಹಣೆ ದಕ್ಷತೆ, ಸಂಪನ್ಮೂಲ ನಿರ್ವಹಣೆ, ಸೇವೆಗಳ ಸುಲಭ ಲಭ್ಯತೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆ ಸೇರಿ ಆಡಳಿತ ಹಾಗೂ ನಾಗರಿಕ ಸೇವೆಗಳ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹೊಸ ಮತ್ತು ಅನುಷ್ಠಾನಕ್ಕೆ ಸಿದ್ಧವಿರುವ ಪರಿಹಾರಗಳನ್ನು ಅಭಿವೃದ್ಧಿಪಡಿಸಿವೆ. ನಾವೀನ್ಯತೆ, ತಾಂತ್ರಿಕ ಸಾಮರ್ಥ್ಯ, ಉತ್ಪನ್ನಗಳ ಸಿದ್ಧತೆ, ಸರ್ಕಾರಿ ವ್ಯವಸ್ಥೆ ಅಳವಡಿಸಿಕೊಳ್ಳುವ ಸಾಧ್ಯತೆ, ವಿಸ್ತರಣಾ ಸಾಮರ್ಥ್ಯ ಮತ್ತು ಇತರ ತಾಂತ್ರಿಕ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಸಾಮರ್ಥ್ಯ ಸೇರಿ ವಿವಿಧ ಮಾನದಂಡಗಳ ಆಧಾರದ ಮೇಲೆ ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ನವೋದ್ಯಮಕ್ಕೂ ಗರಿಷ್ಠ 25 ಲಕ್ಷ ರು. ನೀಡಲಾಗುತ್ತದೆ.

ಪ್ರಜಾ ಸೇವೆ ಇಲಾಖೆ :

ಪ್ರಜಾಸೇವೆ ಇಲಾಖೆಗೆ ಬರುವ ದೂರು ನಿರ್ವಹಣೆ ಮತ್ತು ಪರಿಹಾರ ವ್ಯವಸ್ಥೆ ಮೇಲೆ ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಕೆಲಸ ಮಾಡಲು ‘ಸ್ಯಾನ್‌ಮೆಜೋರಾ’, ಕೃತಕ ಬುದ್ಧಿಮತ್ತೆ ಆಧಾರಿತ ಏಕೀಕೃತ ನಾಗರಿಕ ಕರೆ ಕೇಂದ್ರ ನಿರ್ವಹಣೆಗೆ ‘ವಿಟಿಟಿ ಎಐ ಪ್ರೈ.ಲಿ.’, ಕೃತಕ ಬುದ್ಧಿಮತ್ತೆ ಆಧಾರಿತ ಇ-ಕಚೇರಿ ಮತ್ತು ಅಧಿಕಾರಿಗಳ ಏಕೀಕೃತ ನಿರ್ವಹಣಾ ವ್ಯವಸ್ಥೆ ಜಾರಿಗೆ ‘ಡೇಟಾ ಫ್ರಂಟಿಯರ್‌ ಇನ್ನೋವೇಷನ್ಸ್’ ಮತ್ತು ನಾಗರಿಕ ಸೇವೆಗಳಿಗಾಗಿ ಸರ್ಕಾರಿ ಐಟಿ ವ್ಯವಸ್ಥೆಗಳ ನಿರಂತರ ಲಭ್ಯತೆ ಖಚಿತಪಡಿಸಲು ‘ನೈಫ್‌ ಆ್ಯಪ್ಸ್‌ ಲ್ಯಾಬ್ಸ್‌ ಪ್ರೈ.ಲಿ ಸಂಸ್ಥೆ’ಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು ಜಲಮಂಡಳಿ:

ಬೆಂಗಳೂರು ಜಲಮಂಡಳಿಯ ಆಸ್ತಿಗಳ ಬುದ್ಧಿವಂತ ನಿರ್ವಹಣೆಗೆ ‘ಸ್ಮಾರ್ಟ್‌ ಟೆರಾ’, ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಆದಾಯ ಮತ್ತು ಕಾರ್ಯನಿರ್ವಹಣಾ ಮಾಹಿತಿ ನಿರ್ವಹಣೆಗಾಗಿ ‘ಯುನಿಯಾಕ್ಸ್‌ ಟೆಕ್ನಾಲಜೀಸ್‌’, ಸಮಗ್ರ ನೀರು ನಿರ್ವಹಣೆಗಾಗಿ ಡಿಜಿಟಲ್‌ ಅವಳಿ ತಂತ್ರಜ್ಞಾನಕ್ಕಾಗಿ ಕೃಷಿ ಹೃದಯ ಪ್ರೈ.ಲಿ, ನಗರ ನೀರು ನಿರ್ವಹಣೆಗೆ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್‌ ತಂತ್ರಜ್ಞಾನ ಆಧಾರಿತ ಪರಿಹಾರಕ್ಕಾಗಿ ‘ಕ್ಯಾಲಿಪ್ಸಿಯನ್‌ ಇನ್ನೋವೇಷನ್ಸ್‌ ಎಲ್‌ಎಲ್‌ಪಿ’ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ.