ಎರಡು ವರ್ಷಗಳಲ್ಲಿ ಕರ್ನಾಟಕ ಸೇರಿ 6 ರಾಜ್ಯಗಳ ಸರಿಸುಮಾರು 15000 ರೋಗಿಗಳಿಗೆ 25 ಕೋಟಿ ರು. ಮೌಲ್ಯದ ನಕಲಿ ಔಷಧ ಪೂರೈಕೆಯಾಗಿದೆ ಎಂಬ ಆಂತಕಕಾರಿ ಸಂಗತಿಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆ ಹಚ್ಚಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಎರಡು ವರ್ಷಗಳಲ್ಲಿ ಕರ್ನಾಟಕ ಸೇರಿ 6 ರಾಜ್ಯಗಳ ಸರಿಸುಮಾರು 15000 ರೋಗಿಗಳಿಗೆ 25 ಕೋಟಿ ರು. ಮೌಲ್ಯದ ನಕಲಿ ಔಷಧ ಪೂರೈಕೆಯಾಗಿದೆ ಎಂಬ ಆಂತಕಕಾರಿ ಸಂಗತಿಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆ ಹಚ್ಚಿದೆ.
ಇದರ ಬೆನ್ನಲ್ಲೇ ನಕಲಿ ಔಷಧ ಸೇವಿಸಿದವರಲ್ಲಿ ಮೃತಪಟ್ಟಿರುವವರ ಕುರಿತು ಎಸ್ಐಟಿ ಶೋಧನೆಗಿಳಿದಿದೆ. ನಕಲಿ ಔಷಧ ಮಾರಾಟ ದಂಧೆಯ ಕಿಂಗ್ಪಿನ್ ಪ್ರಶಾಂತ್ ಬಾಬು ಅವರ ಸಂಪರ್ಕ ಜಾಲವನ್ನು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅಂಜನ್ ಕುಮಾರ್ ಸಾರಥ್ಯದ ತಂಡ ಜಾಲಾಡಿದಾಗ ಔಷಧ ಪೂರೈಕೆಯ ಸಮಗ್ರ ವಿವರ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.ಈ ಮಾಹಿತಿ ಮೇರೆಗೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಎಸ್ಐಟಿ ಮಾಹಿತಿ ಹಂಚಿಕೊಂಡಿದ್ದು, ನಕಲಿ ಔಷಧ ಸೇವಿಸಿದ ರೋಗಿಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿ ವರದಿ ನೀಡುವಂತೆ ಮನವಿ ಮಾಡಲಾಗಿದೆ ಎನ್ನಲಾಗಿದೆ.
ಚೆನ್ನೈನಲ್ಲಿ ನೋಂದಣಿ-ಹೊರ ರಾಜ್ಯದಲ್ಲಿ ಬ್ಯುಸಿನೆಸ್:ಚೆನ್ನೈನಲ್ಲಿ ‘ಡಿಎಂ ಫಾರ್ಮ’ ಹೆಸರಿನ ಔಷಧ ವಿತರಣೆ ಏಜೆನ್ಸಿಯನ್ನು ಶಿವಮೊಗ್ಗದ ಪ್ರಶಾಂತ್ ನೋಂದಣಿ ಮಾಡಿಸಿದ್ದ. ಆದರೆ ತನ್ನ ಏಜೆನ್ಸಿಯ ಔಷಧ ಪೂರೈಕೆ ಕಾರ್ಯಾಚರಣೆಗೆ ಬೆಂಗಳೂರನ್ನು ಕೇಂದ್ರವಾಗಿಸಿದ್ದ. ಸ್ಥಳೀಯವಾಗಿ ಏಜೆನ್ಸಿ ನೋಂದಣಿ ಮಾಡಿಸಿದರೆ ಅಧಿಕಾರಿಗಳ ಕಣ್ಣಿಗೆ ಬೀಳಬಹುದು ಎಂದು ಅಂದಾಜಿಸಿ ಹೊರರಾಜ್ಯದಲ್ಲಿ ಏಜೆನ್ಸಿ ಆರಂಭಿಸಿ ದಂಧೆ ನಡೆಸಿದ್ದಾನೆ. ಹೀಗಾಗಿಯೇ ಆತನ ಔಷಧ ವಹಿವಾಟಿನ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆಗೆ ಮಾಹಿತಿ ಇರಲಿಲ್ಲ.
ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ ಫೈಜರ್ ಕಂಪನಿಯ ಆ್ಯಂಟಿಬಯೋಟಿಕ್ ಔಷಧಗಳಾದ ಝವಿಸೆಫ್ಟಾ (zavicefta) ಹಾಗೂ ಎಂಬ್ಲಾವಿಯೋ (emblaveo) ಅನ್ನು ಪ್ರಮುಖವಾಗಿ ಪ್ರಶಾಂತ್ ಹಂಚಿಕೆ ಮಾಡಿದ್ದಾನೆ. ಈತನ ಏಜೆನ್ಸಿ ಕಚೇರಿ ಸೇರಿ ಆ ದಂಧೆಗೆ ಸೇರಿದ ಕೆಲ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ದಾಖಲೆಗಳು ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ 2ವರ್ಷಗಳಲ್ಲಿ ಆರು ರಾಜ್ಯಗಳಲ್ಲಿ 56,000 ನಕಲಿ ಔಷಧಗಳನ್ನು ಪ್ರಶಾಂತ್ ಪೂರೈಕೆ ಮಾಡಿದ್ದ ಮಾಹಿತಿ ಲಭಿಸಿತು ಎಂದು ಮೂಲಗಳು ಹೇಳಿವೆ. ಪ್ರಶಾಂತ್ ವಿಚಾರಣೆ ನಡೆಸಿದಾಗ ಪೂರೈಕೆದಾರರ ಮಾಹಿತಿ ಸಿಕ್ಕಿತು. ಕೂಡಲೇ ಕಾರ್ಯಾಚರಣೆ ನಡೆಸಿ ಸರಬರಾಜಿಗೆ ಸಿದ್ಧವಾಗಿದ್ದ ಸುಮಾರು 6,000 ಔಷಧಗಳನ್ನು ಜಪ್ತಿ ಮಾಡಲಾಯಿತು ಎಂದು ತಿಳಿದುಬಂದಿದೆ. ಮೃತಪಟ್ಟವರ ವಿವರ ಕೆದಕಿದ ಎಸ್ಐಟಿಆರು ರಾಜ್ಯಗಳಲ್ಲಿ ನಕಲಿ ಔಷಧ ಸೇವಿಸಿ ಮೃತಪಟ್ಟವರ ಕುರಿತು ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ. ಪ್ರಶಾಂತ್ ಹಾಗೂ ಆತನ ಸಹಚರರ ಸಂಪರ್ಕದಲ್ಲಿದ್ದ ಆಸ್ಪತ್ರೆಗಳು ಹಾಗೂ ಔಷಧ ಮಾರಾಟ ಮಳಿಗೆಗೆ ಎಸ್ಐಟಿ ಬಿಸಿ ಮುಟ್ಟಿಸಿದೆ. ಈವರೆಗೆ ಕೆಲವರ ಮಾಹಿತಿ ಸಿಕ್ಕಿದೆ. ಈ ಔಷಧ ಸೇವನೆಯಿಂದ ಜನ ಮೃತಪಟ್ಟಿದ್ದರೆ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಏನಿದು ಪ್ರಕರಣ?:ಕಳೆದ ಜೂನ್ನಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪ ಸಿ.ಕೆ.ತಾಂಡ್ಯ ಗ್ರಾಮದ ತೋಟದ ಮನೆ ಮೇಲೆ ಸ್ಥಳೀಯ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ನಕಲಿ ಔಷಧ ಮಾರಾಟ ಜಾಲ ಪತ್ತೆಯಾಗಿತ್ತು. ಈ ಬಗ್ಗೆ ಎಸ್ಐಟಿ ತನಿಖೆಗೆ ಸರ್ಕಾರ ಆದೇಶಿಸಿತು. ಅದರಂತೆ ತನಿಖೆಗಿಳಿದ ಎಸ್ಐಟಿ ಅಧಿಕಾರಿಗಳು, ಅಜರ್ಬೈಜಾನ್ ದೇಶದಲ್ಲಿ ಅಡಗಿದ್ದ ಕಿಂಗ್ ಪಿನ್ ಪ್ರಶಾಂತ್ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.ಯಾವ್ಯಾವ ರಾಜ್ಯಗಳು?
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಪ್ರಶಾಂತ್ ತಂಡದಿಂದ ನಕಲಿ ಔಷಧ ಪೂರೈಕೆಯಾಗಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ನಕಲಿ ಔಷಧ ಉತ್ಪಾದನಾ ಘಟಕಗಳು
ಹರ್ಯಾಣ, ಚಂಡೀಗಢ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿರುವ ಕೆಲ ಔಷಧ ತಯಾರಿಕಾ ಕಂಪನಿಗಳನ್ನು ಬಳಸಿಕೊಂಡು ತಮ್ಮ ಏಜೆನ್ಸಿಯ ಔಷಧ ಬ್ರ್ಯಾಂಡ್ ಅನ್ನು ಪ್ರಶಾಂತ್ ತಂಡ ತಯಾರಿಸಿದೆ ಎಂದು ತಿಳಿದು ಬಂದಿದೆ.ಆಸ್ಪತ್ರೆಗಳು, ಔಷಧ ಅಂಗಡಿಗಳು
100ಕ್ಕೂ ಹೆಚ್ಚಿನ ಆಸ್ಪತ್ರೆಗಳು ಹಾಗೂ ಔಷಧ ಮಾರಾಟ ಮಳಿಗೆಗಳಿಗೆ ನಕಲಿ ಔಷಧಗಳನ್ನು ಪ್ರಶಾಂತ್ ಪೂರೈಸಿದ್ದಾನೆ. ಡಿಎಂ ಫಾರ್ಮ, ಕೃಪಾ ಫಾರ್ಮ ಹೀಗೆ ವಿವಿಧ ಏಜೆನ್ಸಿಗಳ ಮೂಲಕ ನಕಲಿ ಔಷಧ ವಿತರಣೆಯಾಗಿದೆ ಎಂದು ಗೊತ್ತಾಗಿದೆ. ನಕಲಿ ಔಷದ ಜಾಲದಿಂದ ಔಷಧ ಖರೀದಿಸಿದ ಆಸ್ಪತ್ರೆಗಳು, ಔಷಧ ಮಾರಾಟ ಮಳಿಗೆಗಳು ಹಾಗೂ ಏಜೆನ್ಸಿಗಳ ಬಗ್ಗೆ ಎಸ್ಐಟಿ ವಿವರ ಪಡೆದಿದೆ. ಈ ಆಸ್ಪತ್ರೆಗಳ ಪೈಕಿ ಸರ್ಕಾರಿ ಆಸ್ಪತ್ರೆಗಳೂ ಸೇರಿವೆ ಎಂದು ತಿಳಿದು ಬಂದಿದೆ.ಎರಡು ವರ್ಷಗಳಲ್ಲಿ 50,000 ಆ್ಯಂಟಿಬಯೋಟಿಕ್ ಔಷಧಗಳ ವಯಲ್ಗಳು ಮಾರಾಟವಾಗಿದ್ದು, ಈವರೆಗೆ ಅವುಗಳನ್ನು 15,000 ರೋಗಿಗಳು ಸೇವಿಸಿರುವ ಮಾಹಿತಿ ಸಿಕ್ಕಿದೆ. ಟರ್ಕಿಯಲ್ಲೇ ಫೈಜರ್ ಕಂಪನಿಯ ಲೇಬಲ್ಗಳನ್ನು ಖರೀದಿಸಿ ಪ್ರಶಾಂತ್ ತಂದಿದ್ದ. ಬಳಿಕ ನಕಲಿ ಔಷಧಕ್ಕೆ ಫೈಜರ್ ಕಂಪನಿ ಲೇಬಲ್ ಅಂಟಿಸಿ ಆರೋಪಿಗಳು ಮಾರಾಟ ಮಾಡಿದ್ದಾರೆ. ವಯಲ್ಗೆ ತಲಾ 5 ಸಾವಿರ ರು. ನಿಗದಿಯಾಗಿದ್ದು, ಎರಡು ವರ್ಷಗಳಲ್ಲಿ 25 ಕೋಟಿ ರು. ಮೌಲ್ಯದ ಔಷಧ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
