ಇಂದು ಕೂಡ್ಲಿಗಿಯ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ

KannadaprabhaNewsNetwork |  
Published : Nov 09, 2025, 03:15 AM IST
ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿರುವುದ್ದರಿಂದ ಅಂದಾಜು 50 ಸಾವಿರ ಜನತೆ ಕುಳಿತುಕೊಳ್ಳುವ ಅದ್ದೂರಿ ವೇದಿಕೆ ಶನಿವಾರ ನಿರ್ಮಾಣವಾಗುತ್ತಿರುವ ದೖಶ್ಯ. | Kannada Prabha

ಸಾರಾಂಶ

ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದೆ.

ಕೂಡ್ಲಿಗಿ: ತಾಲೂಕಿನ ಜನತೆಯ ನಾಲ್ಕು ದಶಕಗಳ ಕನಸು ಇಂದು ನನಸಾಗಲಿದ್ದು, ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಈ ಐತಿಹಾಸಿಕ ಕಾರ್ಯಕ್ರಮ ನ.9ರಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಗುಡೇಕೋಟೆ ರಸ್ತೆಯ ಶಾಸಕರ ಕಚೇರಿ ಮುಂಭಾಗದ ವಿಶಾಲ ಜಮೀನುಗಳಲ್ಲಿ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಹಲವು ಮಂತ್ರಿಗಳು ಭಾಗವಹಿಸಲಿದ್ದಾರೆ. ಜನರ, ರೈತರ ಕಾರ್ಯಕ್ರಮಕ್ಕೆ ಕೂಡ್ಲಿಗಿ ತಾಲೂಕಿನ ಜನತೆ ಭಾಗವಹಿಸಬೇಕು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದ್ದಾರೆ.ಅವರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಕಾರ್ಯಕ್ರಮದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಎನ್.ಎಸ್. ಬೋಸರಾಜು, ಡಾ.ಜಿ.ಪರಮೇಶ್ವರ, ಎಚ್.ಕೆ. ಪಾಟೀಲ್, ಕೆ.ಎಚ್.ಮುನಿಯಪ್ಪ, ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ಯಾನಿತರಾಗಿ ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಆಗಮಿಸಲಿದ್ದು, ಕೆರೆನೀರು ತುಂಬಿಸುವ ಯೋಜನೆ ಪ್ರಾರಂಭವಾಗಿದ್ದು ಇವರ ಅವಧಿಯಲ್ಲಿಯೇ. ಈಗಿನ ಶಾಸಕರಾದ ಡಾ.ಎನ್.ಟಿ. ಶ್ರೀನಿವಾಸ್ ಈ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯ ಶಾಸಕರು, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಭಾಗವಹಿಸಲಿದ್ದಾರೆ.

ಇತಿಹಾಸದಲ್ಲಿಯೇ ದೊಡ್ಡ ವೇದಿಕೆ: ಕೂಡ್ಲಿಗಿ ಹಿಂದೆಂದೂ ಕಂಡರಿಯದ ವೇದಿಕೆ ಇದಾಗಿದೆ. 15 ದಿನಗಳಿಂದಲೂ ವೇದಿಕೆ ಸಿದ್ಧ ಮಾಡಲಾಗಿದ್ದು ವೇದಿಕೆಯನ್ನು ನೋಡಲು ಜನತೆ ಈಗ ವಾರದಿಂದಲೂ ಕುಟುಂಬ ಸಮೇತ ಭೇಟಿ ನೀಡುತ್ತಿದ್ದಾರೆ. ಅಂದಾಜು 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವೇದಿಕೆಯಲ್ಲಿ ಸಾಂಕೇತಿಕವಾಗಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಹಸಿರು ಸ್ವಿಚ್ ಆನ್ ಮಾಡುವುದರ ಮೂಲಕ ಕೂಡ್ಲಿಗಿ ತಾಲೂಕಿನ 74ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲು ಹಸಿರು ನಿಶಾನೆ ತೋರಿಸಲಿದ್ದಾರೆ.

ಮುಖ್ಯಮಂತ್ರಿ ಬರಲಿರುವುದರಿಂದ ಇಡೀ ಪಟ್ಟಣದ ರಸ್ತೆಗಳು, ಚರಂಡಿಗಳು, ಪಾದಾಚಾರಿ ಮಾರ್ಗಗಳು ದುರಸ್ತಿ ಭಾಗ್ಯ ಕಂಡಿವೆ. ಜನತೆಯಂತೂ ಮುಖ್ಯಮಂತ್ರಿ ಬರುವುದರಿಂದ ನಮ್ಮ ರಸ್ತೆಗಳು ಚೆನ್ನಾಗಿ ಆದವು ಎಂದು ಸಂತಸಪಡುತ್ತಿದ್ದಾರೆ. ಪಟ್ಟಣದ ತುಂಬೆಲ್ಲ ಕಟೌಟ್, ಬ್ಯಾನರ್ ಗಳಿಂದ ತುಂಬಿದ್ದು ಇಡೀ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ