ಮಂಜುನಾಥ ಕೆ.ಎಂ. ಬಳ್ಳಾರಿ
ಪಾದಯಾತ್ರೆಯ ಸಂದರ್ಭದಲ್ಲಿ ಹಳೆಯ ದರೋಜಿಗೆ ಆಗಮಿಸಿದ ವಿಜಯೇಂದ್ರ ಬುರ್ರಕಥಾ ಈರಮ್ಮ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಈರಮ್ಮ ಅವರ ಕುಟುಂಬದ ಸದಸ್ಯರಿಂದ ಅವರ ಬದುಕು, ಕಲಾಸೇವೆ ಹಾಗೂ ಜಾನಪದ ಲೋಕಕ್ಕೆ ನೀಡಿದ ಕೊಡುಗೆಯ ಕುರಿತು ಮಾಹಿತಿ ಪಡೆದುಕೊಂಡರು.
ಬುರ್ರಕಥಾ ಈರಮ್ಮ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ವಿಶಿಷ್ಟ ಕಲಾ ಪ್ರಕಾರದ ಮೂಲಕ ಜನಪದ ಬದುಕು, ಸಾಮಾಜಿಕ ಸಂದೇಶ ಹಾಗೂ ಗ್ರಾಮೀಣ ಸಂಸ್ಕೃತಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದರು ಎಂದು ಕುಟುಂಬದ ಸದಸ್ಯರು ವಿಜಯೇಂದ್ರ ಅವರ ಗಮನಕ್ಕೆ ತಂದರು.ಬುರ್ರಕಥಾ ಈರಮ್ಮ ಅವರ ಕುಟುಂಬದ ಸದಸ್ಯರಾದ ರಾಮುಡು, ಶಂಕರ್ ಕುಮಾರ್, ಮಾರೆಪ್ಪ, ಗಾದಿಲಿಂಗ, ಅಶ್ವರಾಮಣ್ಣ ಹಾಗೂ ಅಶ್ವ ನಾಗರಾಜ ಅವರು ಈರಮ್ಮ ಅವರ ಕಲಾ ಬದುಕಿನ ವಿವಿಧ ಆಯಾಮಗಳನ್ನು ವಿಜಯೇಂದ್ರ ಅವರಿಗೆ ವಿವರಿಸಿದರು.
ಈರಮ್ಮ ಅವರ ಸ್ಮಾರಕವು ಕೇವಲ ಅವರ ನೆನಪಿನ ಸ್ಥಳವಾಗಿರದೆ ಮುಂದಿನ ಪೀಳಿಗೆಗೆ ಜಾನಪದ ಕಲೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕೇಂದ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಕುಟುಂಬದವರು ಮನವಿ ಮಾಡಿದರು.
ವಸತಿ, ಮೂಲಸೌಕರ್ಯ ಸೇರಿದಂತೆ ಅಲೆಮಾರಿ ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ಅಗತ್ಯದ ಕುರಿತು ಸಮುದಾಯದವರು ಗಮನ ಸೆಳೆದರು. ಹಲವು ವರ್ಷಗಳಿಂದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವ ತಮ್ಮ ಸಮುದಾಯಕ್ಕೆ ಸರ್ಕಾರದಿಂದ ಸೂಕ್ತ ನೆರವು ದೊರೆಯಬೇಕು ಎಂದು ಮನವಿ ಮಾಡಿದರು. ಅಲೆಮಾರಿ ಸಮುದಾಯದ ಸಮಸ್ಯೆ ಆಲಿಸಿದ ವಿಜಯೇಂದ್ರ ಅವರು, ಅವರ ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು. ಸಮುದಾಯದ ಜನರ ಬದುಕಿನಲ್ಲಿ ಸುಧಾರಣೆ ತರಲು ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದರು.
ಜಾನಪದ ಕಲಾವಿದರ ಸೇವೆ ಗುರುತಿಸುವುದು ಹಾಗೂ ಅವರ ನೆನಪು ಮುಂದಿನ ಪೀಳಿಗೆಗೆ ಉಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸ್ಮಾರಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂಬ ಭರವಸೆ ನೀಡಿದರು.