ಕೈಗಾರಿಕೆಗಳಿಗೆ ಉತ್ತೇಜಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ: ಡಿಸಿ ಸ್ವರೂಪ ಟಿ.ಕೆ

KannadaprabhaNewsNetwork |  
Published : Jun 27, 2025, 12:48 AM IST
26ಕೈಗಾರಿಕೆ | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಡಿಎಲ್‌ಎಂಸಿ ಸಭೆ ನಡೆಯಿತು.

ಕೈಗಾರಿಕಾ ಸ್ಪಂದನ ಸಮಿತಿ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದಕ್ಕೆ ಉದ್ಯಮಿಗಳನ್ನು ಪ್ರೋತ್ಸಾಹಿಸಿ, ಈ ಮೂಲಕ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶಗಳು ಲಭಿಸುವಂತೆ ಕಾರ್ಯಪ್ರವೃತ್ತರಾಗಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಡಿಎಲ್‌ಎಂಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಮಾಹಿತಿ, ಎಲ್ಲ ರೀತಿಯ ಮೂಲ ಸೌಕರ್ಯಗಳುಳ್ಳ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಿ, ನೀಡಿದ್ದಲ್ಲಿ ಹೆಚ್ಚು ಕೈಗಾರಿಕೆಗಳು ಆರಂಭಗೊಂಡು ಜಿಲ್ಲೆಯ ಜನತೆಗೆ ಉದ್ಯೋಗಾವಕಾಶಗಳು ಲಭಿಸುತ್ತವೆ. ಇದಕ್ಕೆ ಒತ್ತು ನೀಡಬೇಕು ಎಂದರು.ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಭೂ ಸ್ವಾಧೀನ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳನ್ನು ಆದ್ಯತೆಯ ಮೇಲೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಡಿ ವರ್ಗದ ಹುದ್ದೆಗಳಿಗೆ ಯಾವುದೇ ರೀತಿಯ ವಿದ್ಯಾರ್ಹತೆ ಇಲ್ಲದಿದ್ದರೂ ಸಹ ನೇಮಕ ಮಾಡಿಕೊಳ್ಳಬೇಕು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈ ಬಗ್ಗೆ ಕೈಗಾರಿಕೆಗಳ ಮಾಲೀಕರು ಹೆಚ್ಚು ಜಾಹೀರಾತು ಪಡಿಸಿ, ನೇಮಕಾತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದರು.ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆ ಕಾರ್ಯವು ನಿರೀಕ್ಷಿತ ಮಟ್ಟದ ಪ್ರಗತಿಯಾಗಿರುವುದಿಲ್ಲ. ಈ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಭೂ ಪರಿಹಾರ ಪಡೆಯಲು ಅನಾಸಕ್ತಿ ತೋರಿರುವ ಭೂ ಮಾಲೀಕರಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಿಟ್ಟು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂಲ ಮಂಜೂರಾತಿದಾರರು ನಿವೇಶನಗಳನ್ನು ಇತರರಿಗೆ ಲೀಸ್ ಆಧಾರದ ಮೇಲೆ ನೀಡಿದ್ದು, ಅವರು ಆರ್.ಎಂ.ಸಿ. ಘಟಕಗಳನ್ನು ಪ್ರಾರಂಭಿಸಲು ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇದರಿಂದಾಗಿ ವಾಯುಮಾಲಿನ್ಯ, ಜಲಮಾಲಿನ್ಯ ಸೇರಿದಂತೆ ಮತ್ತಿತರ ಸಮಸ್ಯೆಗಳು ಉಂಟಾಗಿವೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದ ಅವರು, ಇವುಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಫಲಾನುಭವಿಗಳ 558 ಘಟಕಗಳಿಗೆ 2025.16 ಲಕ್ಷ ರೂ. ನಷ್ಟು ಮಾರ್ಜಿನ್ ಹಣ ಬಿಡುಗಡೆಯಾಗಬೇಕಾಗಿತ್ತು. ಆದರೆ ಈವರೆಗೆ 171 ಘಟಕಗಳಿಗೆ 570.12 ಲಕ್ಷ ರೂ. ನಷ್ಟು ಬಿಡುಗಡೆಯಾಗಿದೆ. ಬಾಕಿ ಉಳಿದ 387 ಘಟಕಗಳಿಗೆ 1455.04 ಲಕ್ಷ ರೂ. ನಷ್ಟು ಮಾರ್ಜಿನ್ ಹಣ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು.ಕೈಗಾರಿಕೆಗಳನ್ನು ಸ್ಥಾಪಿಸಲು ಬಂದಂತಹ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದ ಅವರು ಹೊಸದಾಗಿ ಸಣ್ಣ ಕೈಗಾರಿಕಾ ಘಟಕಗಳನ್ನು ಸೃಜನಿಸಲು ಉತ್ತೇಜಿಸಬೇಕು ಎಂದರು.ಜಿಲ್ಲೆಯಿಂದ ಮೀನುಗಾರಿಕೆ ಉತ್ಪನ್ನ, ಗೋಡಂಬಿ, ಕಾಫಿಬೀನ್, ನೈಲಾನ್, ಫಿಶ್‌ನೆಟ್, ಎಲ್.ಐ.ಡಿ. ಕಂಟೈನರ್‌ಗಳು, ಪಿ.ಪಿ, ಪಿಬ್ಕ್ ಬ್ಯಾಗ್ಸ್ ಸೇರಿದಂತೆ ಮತ್ತಿತರ ಉತ್ಪನ್ನಗಳು ವಿದೇಶಗಳಿಗೆ ರಫ್ತು ಆಗುತ್ತಿವೆ. ಇತರೆ ಉತ್ಪನ್ನಗಳು ರಫ್ತಿಗೆ ಉತ್ತೇಜಿಸಬೇಕು ಎಂದ ಡಿಸಿ, ಮೀನಿನ ಉತ್ಪನ್ನಗಳ ರಫ್ತು ಹೆಚ್ಚಿದೆ. ಎಲ್ಲ ಉತ್ಪನ್ನಗಳ ರಫ್ತು ಪ್ರಮಾಣವನ್ನು ಹೆಚ್ಚಿಸಲು ರಫ್ತುದಾರರು ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತಹ ಸಭೆಯನ್ನು ನಡೆಸಿ, ರಫ್ತನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಕೈಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌