ಓದುವ ಹವ್ಯಾಸ ಉತ್ತೇಜಿಸಿ: ಬಿಇಒ ರೇಖಾ ನಾಯ್ಕ

KannadaprabhaNewsNetwork |  
Published : Feb 02, 2026, 02:30 AM IST
ಯಲ್ಲಾಪುರದ ಸಾಹಿತ್ಯ ಭವನದಲ್ಲಿ ಪತ್ರಿಕೆ ಹಾಗೂ ಸಾಹಿತ್ಯ ಪ್ರೀತಿ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಪತ್ರಿಕೆ, ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕು.

ಯಲ್ಲಾಪುರ ಸಾಹಿತ್ಯ ಭವನದಲ್ಲಿ ಪತ್ರಿಕೆ-ಸಾಹಿತ್ಯ ಪ್ರೀತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪತ್ರಿಕೆ, ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕು. ಎಲ್ಲದಕ್ಕೂ ಮೊಬೈಲ್‌ನ್ನೇ ಅನಿವಾರ್ಯವಾಗಿ ಬಳಸುವ ಸ್ಥಿತಿಗೆ ತಲುಪಿದ್ದೇವೆ ಎಂದು ಬಿಇಒ ರೇಖಾ ನಾಯ್ಕ ಹೇಳಿದರು.

ಪಟ್ಟಣದ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಪತ್ರಿಕೆ ಹಾಗೂ ಸಾಹಿತ್ಯ ಪ್ರೀತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು. ಓದುವವರ ಸಂಖ್ಯೆ ಕಡಿಮೆ ಆಗಿದೆ. ಪುಸ್ತಕ ಓದುವ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಪುಸ್ತಕ ಪ್ರೇಮ ಬೆಳೆಸುವ ಕಾರ್ಯ ಆಗಬೇಕು. ಈ ಕುರಿತು ಯುವ ಜನತೆಗೆ ಜಾಗೃತಿ ಅಗತ್ಯ ಎಂದರು.

ಹಿರಿಯ ಪತ್ರಕರ್ತ, ವಿಶ್ರಾಂತ ಪಾಂಶುಪಾಲ ಬೀರಣ್ಣ ನಾಯಕ ಮೊಗಟಾ ಪತ್ರಿಕೆ ಹಾಗೂ ಸಾಹಿತ್ಯಪ್ರೀತಿ ಕುರಿತು ಉಪನ್ಯಾಸ ನೀಡಿ, ವೈರಿಗಳನ್ನು ಯುಕ್ತಿಯಿಂದ ಜ್ಞಾನದಿಂದ ಗೆಲ್ಲಬೇಕು. ಸಾಹಿತ್ಯ ಅಮಿತವಾದದ್ದು. ಇದಕ್ಕೆ ಮಿತಿ ಎಂಬುದಿಲ್ಲ. ಪತ್ರಿಕೆ ಸಾಹಿತ್ಯದ ಪ್ರಕಾರವಾಗಿದ್ದು, ಅದು ಸಕಾರಾತ್ಮಕ ಚಿಂತನೆ ಹೊಂದಿರಬೇಕು. ಪತ್ರಿಕೆ ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆ. ಸಾಹಿತ್ಯ ಪ್ರೀತಿ ಕೇವಲ ಅಕ್ಷರ ಪ್ರೀತಿಯಷ್ಟೇ ಅಲ್ಲ. ಅದೊಂದು ಅಪ್ಯಾಯಮಾನವಾದ ಜ್ಞಾನ, ಅನುಭವ ಕಟ್ಟಿಕೊಡುವ ಮಾನವೀಯತೆಯ ಸ್ಪಂದನೆಯೂ ಆಗಿದೆ. ಪತ್ರಿಕೆಗಳ ಮೂಲಕವೇ ಹಲವು ಸಾಹಿತಿಗಳು ಸಾಹಿತ್ಯ ರಂಗಕ್ಕೆ ಬಂದಿದ್ದಾರೆ. ಸಾಮಾಜಿಕ ಬದಲಾವಣೆಯಲ್ಲಿ ಪತ್ರಿಕೆಗಳು ಮಾಡುವಷ್ಟು ಪರಿಣಾಮಕಾರಿಯಾಗಿ ಯಾವುದೂ ಮಾಡಲು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಸಾಹಿತ್ಯದ ಜೀವಂತಿಕೆಯ ಮಗ್ಗಲು ಅನಾವರಣವಾಗುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಮಾತನಾಡಿ, ಜಾಲತಾಣಗಳ ಅಬ್ಬರದಲ್ಲಿ ಪತ್ರಿಕೆ ಹಾಗೂ ಸಾಹಿತ್ಯದ ಓದಿನ ಅಭಿರುಚಿ ಕ್ಷೀಣಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಪತ್ರಿಕೆ ಸಾಹಿತ್ಯ ಪ್ರೀತಿ ನಮಗೆ ಆಪ್ತವಾಗಬೇಕು. ಅಂತಹ ಪ್ರಯತ್ನದ ಭಾಗವಾಗಿ ಪತ್ರಿಕೆ ಸಾಹಿತ್ಯ ಪ್ರೀತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೆಗಳಲ್ಲಿನ ಅಂಕಣ, ಬರಹಗಳು ಸಶಕ್ತ ಸಾಹಿತ್ಯ ಆಗಿದೆ. ಪತ್ರಿಕೆ ಯಾವ ಕಾಲಕ್ಕೂ ಸಾಯುವುದಿಲ್ಲ. ಸಾಹಿತ್ಯದ ಅಭಿರುಚಿ ನಮ್ಮದಾಗಿಸಿಕೊಳ್ಳುವ ಮೂಲ ವಾಚನಾಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದರು.

ಕಸಾಪ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಪತ್ರಿಕಾ ಸಂಘದ ತಾಲೂಕು ಉಪಾಧ್ಯಕ್ಷ ಶ್ರೀಧರ ಅಣಲಗಾರ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ